ಬೆಂಗಳೂರು : ಈ ಹಿಂದೆ ಬಿಜೆಪಿಯವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದರು. ಬೆಂಗಳೂರು, ಹುಬ್ಬಳ್ಳಿಯಲ್ಲಿ ಕೇಸ್ ಹಾಕಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುಟುಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯವರು ಅಮಾಯಕರ ಮೇಲೆ ಕೇಸ್ ಹಾಕಿದ್ದಾರೆ. ನಾವು ಅವರ ರೀತಿಯಲ್ಲಿ ಮಾಡುವುದಿಲ್ಲ. ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡಲ್ಲ ಎಂದು ಚಾಟಿ ಬೀಸಿದ್ದಾರೆ.
ಕರಸೇವಕ ಬಂಧನ ವಿರೋಧಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಹಿನ್ನೆಲೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ನಾವು ಯಾರಿಗೂ ತೊಂದರೆ ಕೊಡುವ ಸಂದರ್ಭ ಇಲ್ಲ. ಪೆಡಿಂಗ್ ಇದ್ದ ಕೇಸ್ಗಳನ್ನ ನೋಡಿದ್ದಾರೆ. ಯಾರು ದೇಶಕ್ಕೆ ರಾಜ್ಯಕ್ಕೆ ಅಗೌರವ, ಅಶಾಂತಿ ಮೂಡಿಸುತ್ತಾರೋ ಕಾನೂನು ರೀತಿಯಲ್ಲಿ ಮೊದಲಿಂದಲೂ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಬದುಕಿದ್ದೇವೆ ನೋಡಿ ಅಂತ ಪ್ರೊಟೆಸ್ಟ್ ಮಾಡ್ತಿದ್ದಾರೆ
ಪಾಪ ಎಲೆಕ್ಷನ್ ಹತ್ರ ಬಂತು ಈಗ, ಏಳು ತಿಂಗಳು ಆಯಿತು ವಿಪಕ್ಷ ನಾಯಕರನ್ನ ಮಾಡಲು ಆಗಿರಲಿಲ್ಲ. ಈಗ ಪಾಪ ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಪ್ರತಿಭಟನೆ ಮಾಡುತ್ತಿದ್ದಾರೆ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಪ್ರಜಾಪ್ರಭುತ್ವದಲ್ಲಿ ಜನ ಉತ್ತರ ಕೊಡ್ತಾರೆ. ನಾವು ಸಹ ಉತ್ತರ ಕೊಡುತ್ತೇವೆ. ನಾವು ಅವರ ತರಹ ಅಧಿಕಾರ ದುರುಪಯೋಗ ಮಾಡಿಕೊಳ್ಳಲ್ಲ ಎಂದು ಡಿ.ಕೆ. ಶಿವಕುಮಾರ್ ಕುಟುಕಿದ್ದಾರೆ.