ಧಾರವಾಡ : ಇಷ್ಟು ದಿನ ಮನೆ, ಬ್ಯಾಂಕ್, ಎಟಿಎಂ, ದೇವಸ್ಥಾನಗಳ ಹುಂಡಿಗಳಿಗೆ ಕನ್ನ ಹಾಕುತ್ತಿದ್ದ ಕಳ್ಳರು ಈಗ ರೈತರ ಫಸಲಿನ ಮೇಲೆ ಕಣ್ಣು ಹಾಕಿದ್ದಾರೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮೈಲಾರಪ್ಪ ಕುರಗುಂದ ಅವರ ಜಮೀನಿನಲ್ಲಿ ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಹತ್ತಿಯನ್ನು ಕಳ್ಳರ ಗ್ಯಾಂಗ್ ಬಿಡಿಸಿಕೊಂಡು ಪರಾರಿಯಾಗಿದೆ. ನವಲಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹತ್ತಿ ಬಿಡಿಸುವ ಯೋಚನೆ ಮಾಡಿಕೊಂಡು ಜಮೀನಿಗೆ ಬಂದ ರೈತ ಮಲ್ಲಪ್ಪನಿಗೆ ಹೊಲದಲ್ಲಿನ ಹತ್ತಿ ಇಲ್ಲದನ್ನು ನೋಡಿ ಶಾಕ್ ಆಗಿದೆ. ಹತ್ತಿ ಬೆಳೆ ಫಸಲು ನೀಡಲು ಆರಂಭದಿಂದ ಒಂದು ಬಾರಿ ಹತ್ತಿ ಬೀಡಿಸಿ ಮಾರಾಟ ಮಾಡಿದ್ದು, ಎರಡನೇ ಬಾರಿ ಬೀಡಿಬೇಕಾಗಿತ್ತು. ಮನೆಯಲ್ಲಿ ಕೆಲಸ ಕಾರ್ಯಗಳಿಂದ ಹಾಗೂ ಆಳಿನ ಸಮಸ್ಯೆಯಿಂದ ಹಾಗೆ ಬಿಟ್ಟಿದ ಹತ್ತಿ ಬೆಳೆ ಈಗ ರೈತನ ಕೈತಪ್ಪಿ ಕಳ್ಳರ ಪಾಲಾಗಿದೆ.
4 ರಿಂದ 5 ಕ್ವಿಂಟಲ್ ಹತ್ತಿ ಕಳ್ಳತನ
4 ರಿಂದ 5 ಕ್ವಿಂಟಲ್ ಹತ್ತಿ ಕಳ್ಳತನವಾಗಿದೆ. ಖದೀಮ ಕಳ್ಳರ ಈ ಕೃತ್ಯದಿಂದ ಬ್ಯಾಲ್ಯಾಳ ಗ್ರಾಮದ ರೈತರ ಬೆಚ್ಚಿಬಿದಿದ್ದಾರೆ. ಇಷ್ಟು ದಿನದಲ್ಲಿ ಇದೇ ಮೊದಲ ಬಾರಿಗೆ ನಮ್ಮ ಫಸಲು ಕಳ್ಳತನವಾಗಿದ್ದು, ಆಟೋ ರಿಕ್ಷಾ ತಂದು ಹತ್ತಿಯನ್ನು ಬಿಡಿಸಿಕೊಂಡು ಪರಾರಿಯಾಗಿದ್ದಾರೆ. ಹೀಗಾದರೆ ನಾವು ಬೆಳೆ ಬೆಳೆಯುವುದಾದರೂ ಹೇಗೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫಸಲು ಕದ್ದ ಕಳ್ಳರನ್ನು ಪೊಲೀಸರು ಬಂಧಿಸಿ ಜೈಲಿಗೆಟ್ಟಿ ರೈತರ ಆತಂಕವನ್ನು ದೂರು ಮಾಡುತ್ತಾರೆಯೇ ಎಂಬುದನ್ನ ಕಾದುನೋಡಬೇಕಿದೆ.