ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್, ಕೃಷ್ಣಬೈರೇಗೌಡ ಐಷಾರಾಮಿ ಜೆಟ್‍ನಲ್ಲಿ ಪ್ರಯಾಣ ಮಾಡುತ್ತಾರೆ. ಇತ್ತ ಮಕ್ಕಳು ಜೆಸಿಬಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇದೇನಾ ನಿಮ್ಮ ಸಮಾಜವಾದ..? ಈ ರೀತಿಯ ದೌಲತ್ತು ಸಿಎಂ, ಸಚಿವರಿಗೆ ಬೇಕಿತ್ತಾ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಜಮೀರ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಜೆಟ್ ವಿಮಾನ ಪ್ರಯಾಣದ ವೀಡಿಯೋ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಬರದ ಸಂಕಷ್ಟಕ್ಕೆ ರೈತರು ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. 60 ಲಕ್ಷಕ್ಕೂ ಹೆಚ್ಚು ರೈತರ ಜಮೀನಿನಲ್ಲಿ ಬೆಳೆ ನಷ್ಟ ಆಗಿದೆ. ರೈತರು ಬೇರೆ ರಾಜ್ಯಗಳಿಗೆ ಗುಳೇ ಹೋಗುವ ಪರಿಸ್ಥಿತಿ ಇದೆ. ಮತ್ತೊಂದು ಕಡೆ ಜೆಸಿಬಿಯಲ್ಲಿ (JCB) ಶಾಲೆ ಮಕ್ಕಳು ಶಾಲೆಗೆ ಹೋಗ್ತಿದ್ದಾರೆ. ಇತ್ತ ಸಿಎಂ, ಸಚಿವರು ಖಾಸಗಿ ಜೆಟ್ ನಲ್ಲಿ ಪ್ರಯಾಣ ಮಾಡಿದ್ದಾರೆ. ಬರದ ಛಾಯೆ ಸಂದರ್ಭದಲ್ಲಿ ಐಷಾರಾಮಿ ವಿಮಾನ ಪ್ರಯಾಣ ಬಗ್ಗೆ ಖುಷಿಯಾಗಿದೆ ಅಂತ ಜಮೀರ್ ವಿಡಿಯೋ ಹಂಚಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಹಾಗೂ ಸಚಿವರು ಜೆಟ್ ನಲ್ಲಿ ಪ್ರಯಾಣ, ಮಕ್ಕಳು ಜೆಸಿಬಿಯಲ್ಲಿ ಪ್ರಯಾಣ.. ಇದೇನಾ ನಿಮ್ಮ ಸಮಾಜವಾದ?, ಈ ರೀತಿಯ ದೌಲತ್ತು ಸಿಎಂ, ಸಚಿವರಿಗೆ ಬೇಕಿತ್ತಾ ಎಂದು ಪ್ರಶ್ನಿಸುತ್ತಾ ಅಶೋಕ್ ಅವರು ಎರಡು ಫೋಟೋಗಳನ್ನು ಬಿಡುಗಡೆಗೊಳಿಸಿದರು.
ಏನಿದು ಘಟನೆ..?: ದೆಹಲಿಯಿಂದ ಬೆಂಗಳೂರಿಗೆ ನಮ್ಮ ಹೆಮ್ಮೆಯ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ ಸಂತಸದ ಕ್ಷಣಗಳು ಎಂದು ವೀಡಿಯೋವೊಂದನ್ನು ಜಮೀರ್ ಅಹ್ಮದ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ಇದೀಗ ಭಾರೀ ವೈರಲ್ ಆಗುತ್ತಿದ್ದು, ವೀಡಿಯೋ ಶೇರ್ ಮಾಡಿಕೊಂಡು ಬಿಜೆಪಿ ನಾಯಕರು ಭಾರೀ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.