ಐಸಿಸಿ ವಿಶ್ವಕಪ್ ಗೆದ್ದ ಬಳಿಕ ಟ್ರೋಫಿ ಮೇಲೆ ಕಾಲಿಟ್ಟು ಉದ್ಧಟತನ ಮೆರೆದಿದ್ದ ಆಸ್ಟ್ರೇಲಿಯಾ ಮಿಚೆಲ್ ಮಾರ್ಷ್ ಇಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ತಾವು ವಿಶ್ವಕಪ್ ಗೆ ಅವಮಾನ ಮಾಡುವ ಉದ್ದೇಶ ಹೊಂದಿರಲಿಲ್ಲ. ಅಲ್ಲದೆ, ತಾವು ಅಂದು ಟ್ರೋಫಿ ಮೇಲೆ ಕಾಲಿಟ್ಟು ಪೋಟೋ ತೆಗೆಸಿಕೊಂಡಿದ್ದು ಆಕ್ಷೇಪಾರ್ಹ ನಡವಳಿಕೆಯೂ ಅಲ್ಲ ಎಂದಿದ್ದಾರೆ.
ಒಂದು ಕೈಯಲ್ಲಿ ಬಿಯರ್ ಬಾಟಲ್ ಹಿಡಿದುಕೊಂಡು, ಕಾಲುಗಳನ್ನು ವಿಶ್ವಕಪ್ ಟ್ರೋಫಿಯ ಮೇಲಿಟ್ಟುಕೊಂಡಿದ್ದ ಮಾರ್ಷ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ವಿಶ್ವಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿತ್ತು. ಭಾರತೀಯ ಬೌಲರ್ ಮೊಹಮದ್ ಶಮಿ ಸೇರಿದಂತೆ ಹಲವರು ಆಸಿಸ್ ಕ್ರಿಕೆಟಿಗನ ಉದ್ಧಟತನವನ್ನು ಖಂಡಿಸಿದ್ದರು.
ಇದನ್ನೂ ಓದಿ: 2 ಸಾವಿರ ಮುಖಬೆಲೆಯ ನೋಟ್ ಇಟ್ಟುಕೊಂಡುವರಿಗೆ ಶಾಕ್ ನೀಡಿದ RBI
ಹಲವು ದಿನಗಳ ನಂತರ ಮೌನ ಮುರಿದ ಮಾರ್ಷ್, ತಮ್ಮ ನಡೆಯನ್ನು ಸಮರ್ಥಿಸಿಕೊಂಡರಲ್ಲದೆ, ತಾವು ಆತ್ಮದಲ್ಲಿ ಪ್ರಾಮಾಣಿಕರಾಗಿದ್ದೇವೆ. ಕಾಲ ಬುಡದಲ್ಲಿ ಟ್ರೋಫಿಯನ್ನು ಇಟ್ಟುಕೊಳ್ಳುವುದು ಅದನ್ನು ಜಯಿಸಿರುವುದರ ಸಂಕೇತ. ಮತ್ತೊಮ್ಮೆ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದರೆ ಆಗಲೂ ತಾವು ಇದೇ ರೀತಿ ಮಾಡಲು ಸಿದ್ದ ಎಂದು ಮಾರ್ಷ್ ಹೇಳಿಕೊಂಡಿದ್ದಾರೆ.