ಬೆಂಗಳೂರು: ಈ ಹಿಂದಿನ ಬಿಜೆಪಿ ಸರ್ಕಾರವು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ (ಇಂದು) ಬುಧವಾರ ಎತ್ತಿ ಹಿಡಿದಿದೆ.
ಡಿಕೆಶಿ ವಿರುದ್ದದ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ವಾಪಾಸ್ ಪಡೆದದ್ದನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ, ರಾಜ್ಯ ಸರ್ಕಾರದ ಆದೇಶವನ್ನು ಇದುವರೆಗೂ ಯಾರೂ ಪ್ರಶ್ನೆ ಮಾಡಿಲ್ಲ. ಹೀಗಾಗಿ ಸಿಬಿಐ ಪರ ವಕೀಲರ ವಾದ ಪರಿಗಣಿಸಲು ಸಾಧ್ಯವಿಲ್ಲ. ಅರ್ಜಿದಾರರು ಮನವಿ ಹಿಂಪಡೆಯಲಾಗಿದೆ ಎಂದು ಕೋರ್ಟ್ ತಿಳಿಸಿತು.
ಇದನ್ನೂ ಓದಿ: ಡಿ.5ರವರೆಗೆ ರಾಜ್ಯದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, “ಹೈಕೋರ್ಟ್‌ನಲ್ಲಿ ಏನಾಯ್ತು ಅಂತ ನನಗೆ ಇನ್ನೂ ಗೊತ್ತಾಗಿಲ್ಲ. ನನ್ನ ವಕೀಲರು ತಿಳಿಸಿದ ಬಳಿಕವಷ್ಟೇ ಮಾತನಾಡಲು ಸಾಧ್ಯ,” ಎಂದು ಹೇಳಿದರು.
ಈ ವಿಷಯದ ಕುರಿತಂತೆ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಯಾರು ಯಾರು ಏನೇನು ಮಾತನಾಡಿದ್ದಾರೆ, ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬುದನ್ನು ನೋಡಿದ್ದೇನೆ. ಸೂಕ್ತ ಸಮಯದಲ್ಲಿ ಅದಕ್ಕೆಲ್ಲ ಉತ್ತರ ಕೊಡುತ್ತೇನೆ. ನಾನೇನು ತಪ್ಪು ಮಾಡಿಲ್ಲ. ನಾನು ಮಾಡಿದ್ದೆಲ್ಲ ಪಕ್ಷದ ಸಲುವಾಗಿ ಅಷ್ಟೆ. ಪಕ್ಷಕ್ಕೋಸ್ಕರ ನಾನು ಕೆಲಸ ಮಾಡಿದ್ದು. ಅದಕ್ಕಾಗಿ ನಾನು ಸಾಕಷ್ಟು ಅನುಭವಿಸಿದ್ದೇನೆ. ಮುಂದೆಯೂ ಕೂಡ ತೊಂದರೆ ಕೊಡುತ್ತೇವೆ ಎಂದರೆ, ಅದನ್ನೆಲ್ಲ ನೋಡಲು ಭಗವಂತ ಇದ್ದಾನೆ ಎಂದರು.