ಯಾದಗಿರಿ: ಗುರುಮಠಕಲ್ ತಾಲೂಕಿನ ಸೈದಾಪುರ ಸಮೀಪದ ಬಾಲಛೇಡದಲ್ಲಿರುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಮಾದರಿ ವಸತಿ ಶಾಲೆಯ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಚಿತ್ರ ಚರ್ಮವ್ಯಾಧಿಯಿಂದ ಬಳಲುತ್ತಿದ್ದಾರೆ.
ದೇಹದಾದ್ಯಂತ ತುರಿಕೆ, ಗುಳ್ಳೆಗಳು, ಸುಕ್ಕುಗಟ್ಟಿದಂಥ ವಿಚಿತ್ರ ಚರ್ಮ ಸಮಸ್ಯೆಯಿಂದ ಮಕ್ಕಳು ನರಳುತ್ತಿದ್ದು, ನಿತ್ಯ ಇದೇ ಕಾರಣಕ್ಕೆ15ರಿಂದ 20 ಮಕ್ಕಳು ಶಾಲೆಗೆ ಗೈರಾಗುತ್ತಿದ್ದಾರೆ. ಕಲುಷಿತ ಕುಡಿಯುವ ನೀರು ಹಾಗೂ ನೈರ್ಮಲ್ಯದ ಕೊರತೆಯೇ ಚರ್ಮ ರೋಗಕ್ಕೆ ಮೂಲ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ: ಮಹಿಳಾ ಪ್ರಯಾಣಿಕರಿಂದ ಉಚಿತ ಬಸ್ ಸೇವೆ ದುರುಪಯೋಗ: ಕಂಡೆಕ್ಟರ್ಗಳಿಗೆ ತಲೆಬಿಸಿ!
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಯಾದಗಿರಿ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾಗ ಈ ಚರ್ಮವ್ಯಾಧಿ ವಿಚಾರ ಬೆಳಕಿಗೆ ಬಂದಿದೆ. ಚರ್ಮರೋಗದ ಕಾರಣಕ್ಕೇ ದಿನಂಪ್ರತಿ ಏನಿಲ್ಲವೆಂದರೂ 15-20 ವಿದ್ಯಾರ್ಥಿಗಳು ಶಾಲೆಗೆ ಗೈರಾಗಿ, ತುಸು ಚೇತರಿಸಿಕೊಳ್ಳುವವರೆಗೂ ಮನೆಯಲ್ಲೇ ಉಳಿಯುತ್ತಾರೆ. ವಿಚಾರಣೆ ವೇಳೆ ಮಕ್ಕಳಿಂದಲೇ ಈ ವಿಚಾರ ಬಯಲಾಯಿತು.
ಶಾಲೆಯಲ್ಲಿ ಪರಿಶೀಲನೆ ನಡೆಸಿದಾಗ ಕುಡಿಯುವ ಹಾಗೂ ಬಳಸುವ ನೀರಿನ ಸಂಪ್‌ನಲ್ಲಿ ಸಾಕಷ್ಟು ತ್ಯಾಜ್ಯ ಬೆರೆತಿರುವುದು ಕಂಡುಬಂದಿದೆ. ಬಹುತೇಕ ಈ ನೀರು ಕುಡಿಯಲು ಅಯೋಗ್ಯ ಎಂಬಂಥ ಸ್ಥಿತಿಯಲ್ಲಿತ್ತು. ಇದೇ ಮಕ್ಕಳ ಚರ್ಮರೋಗಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಿರುವ ಅವರು, ಎಲ್ಲರ ಆರೋಗ್ಯ ತಪಾಸಣೆಗೂ ಆಗ್ರಹಿಸಿದರು.