ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬಹಳ ಅನುಭವಿ ರಾಜಕಾರಣಿ. ಎರಡು ಬಾರಿ ಸಿಎಂ ಆಗಿದ್ದವರು. ಅವರು ಏನು ಸಲಹೆ ನೀಡಿದ್ರು ಮಿತ್ರ ಪಕ್ಷ ಪರಿಗಣಿಸುತ್ತದೆ ಎಂದು ಹೆಚ್ಡಿಕೆಯನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಡಿ ಹೊಗಳಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಗ ನಮ್ಮದು ಮಿತ್ರ ಪಕ್ಷ. ನಮಗೆ ಸಲಹೆ ನೀಡೋಕೆ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಅಧಿಕಾರ ಇದೆ. ನಾವು ಜೆಡಿಎಸ್ಗೆ ಸಲಹೆ ನೀಡುವ ಅಧಿಕಾರ ಇದೆ. ನಾವು ಹೊಂದಾಣಿಕೆಯಲ್ಲಿ ಇದ್ದೇವೆ. ಕುಮಾರಸ್ವಾಮಿರಿಗೆ ಸಲಹೆ ಕೊಡವ ಸ್ಥಿತಿ ಈಗ ಇಲ್ಲ. ಅಂತಹ ಸಂದರ್ಭ ಬಂದರೆ ಸಲಹೆ ಕೊಡ್ತೀನಿ ಎಂದು ಹೇಳಿದರು.
ರಾಜ್ಯದಲ್ಲಿ ಆಪರೇಷನ್ ಕಮಲ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮತ್ತೆ ಮುಂಬಯಿ ಕಡೆನಾ? ಬಹುಶಃ ಹಳೆ ಗುಂಗಿನಲ್ಲಿ ಇರಬೇಕು. ಅದೇ ಮುಂಬಯಿ ಗುಂಗಿನಲ್ಲಿ ಡಿಕೆಶಿ ಇದ್ದಾರೆ. ಅವರ ಶಾಸಕರನ್ನು ಉಳಿಸಿಕೊಂಡ್ರೆ ಸಾಕು. ಅವರ ಶಾಸಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಕಾಂಗ್ರೆಸ್ ಶಾಸಕರೇ ಹೇಳ್ತಾರೆ ಸಚಿವರು ಕಾಲ್ ಫಿಕ್ ಮಾಡಲ್ಲ ಅಂತ. ಮಂತ್ರಿಗಳು ಉದ್ದನದಿಂದ ಮಾತನಾಡ್ತಾರೆ. ನಾವು ಆಪರೇಷನ್ ಮಾಡುವ ಅಗತ್ಯ ಇಲ್ಲ, ಅವರೇ ನಾರ್ಮಲ್ ಡಿಲವರಿ ಆಗ್ತಾರೆ ಎಂದು ನಗೆ ಚಟಾಕಿ ಹಾರಿಸಿದರು.