ಬೆಂಗಳೂರು : ಗುತ್ತಿಗೆದಾರರಿಂದ ಹಣ ಸಂಗ್ರಹಿಸಲು ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ ಅಲಿಯಾಸ್ ಎಸ್‌ಬಿಐ ಸ್ಥಾಪನೆ ಮಾಡಲಾಗಿದೆ ಎಂದು ಶಿಕಾರಿಪುರ ಬಿಜೆಪಿ ಶಾಸಕ ಬಿ.ವೈ ವಿಜಯೇಂದ್ರ ಲೇವಡಿ ಮಾಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಆರ್‌ಬಿಐ ಇದೆ. ಆದರೆ, ಕಾಂಗ್ರೆಸ್‌ನವರು ಎಸ್‌ಬಿಐ ಬ್ರಾಂಚ್ ಓಪನ್ ಮಾಡಿಕೊಂಡಿದ್ದಾರೆ. ಎಸ್‌ಬಿಐ ಎಂದರೆ ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ ಎಂದು ಡಿಕೆಶಿಗೆ ಟಕ್ಕರ್ ನೀಡಿದರು.
ಕಾಂಗ್ರೆಸ್ ಅಜೆಂಡಾ ಸ್ಪಷ್ಟವಿದೆ, ಗೊಂದಲ ಇಲ್ಲ. ಎಲ್ಲ ಮೂಲಗಳಿಂದ ಹಣ ಸಂಗ್ರಹ ಮಾಡಿ ಪಂಚ ರಾಜ್ಯಗಳಿಗೆ ಕಳಿಸೋದು. ಮತ್ತೆ ಲೋಕಸಭಾ ಚುನಾವಣೆಗೆ ಹಣ ಸಂಗ್ರಹ ಮಾಡೋದನ್ನು ಬಹಿರಂಗವಾಗಿ, ಸಂಕೋಚ ಇಲ್ಲದೇ ಲೂಟಿ ಮಾಡ್ತಿದ್ದಾರೆ. ಆದರೆ, ಅವರ ದುರಾದೃಷ್ಟವಶಾತ್ ಐಟಿ ದಾಳಿಯಿಂದ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಚಾಟಿ ಬೀಸಿದರು.
ಲೂಟಿ ಸರ್ಕಾರ ಅಸ್ತಿತ್ವದಲ್ಲಿರೋದು ನಿಜ
ಕಾಂಗ್ರೆಸ್ ಸಚಿವರು ಗುತ್ತಿಗೆದಾರರ ಮೂಲಕ ಹಣ ಸಂಗ್ರಹಿಸುತ್ತಿದ್ದಾರೆ. ಅನ್ಯ ರಾಜ್ಯಗಳಿಗೆ ಬಿಬಿಎಂಪಿ ಸೇರಿದಂತೆ ಬೇರೆ ಬೇರೆ ಇಲಾಖೆಗಳಿಂದ ಹಣ ಸಂಗ್ರಹಿಸಿ ಸಾಗಿಸ್ತಿರೋದು ಮೇಲ್ನೋಟಕ್ಕೆ ಕಂಡು ಬಂದಿದೆ. ರಾಜ್ಯದಲ್ಲಿ ಲೂಟಿ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದು ನಿಜ. ಲೂಟಿ ಮಾಡುವ ಮೂಲಕ ಬೇರೆ ರಾಜ್ಯಗಳಲ್ಲಿ ಚುನಾವಣೆ ಗೆಲ್ಲುವ ಹುನ್ನಾರ ನಡೆದಿದೆ. ಇದಕ್ಕೆ ನಾವು ಅವಕಾಶ ಕೊಡಲ್ಲ ಎಂದು ಗುಡುಗಿದರು.
ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ
ಕಾಂಗ್ರೆಸ್ ಪಕ್ಷದ ಮುಖಂಡರೆಲ್ಲರೂ ಈ ದಾಳಿ ರಾಜಕೀಯಪ್ರೇರಿತ ಎಂದು ಹೇಳುತ್ತಿದ್ದಾರೆಯೇ ಹೊರತು ಯಾರೂ ಸ್ವಾಗತ ಮಾಡಿಲ್ಲ. ಈ ಹಣ ನಮ್ಮದಲ್ಲ ಅಂತ ಹೇಳ್ತಿಲ್ಲ. ಅಂದರೆ ಈ ಹಣ ಕಾಂಗ್ರೆಸ್ ಪಕ್ಷಕ್ಕೆ ಸೇರಿರೋದು ಅಂತ ಅವರೇ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ಎಲ್ಲಿಗೆ ಬಂದು ನಿಂತಿದೆ ಎಂದರೆ ದಸರಾಗೆ ಬಂದ ಕಲಾವಿದರ ಬಳಿಯು ಲಂಚ ಕೇಳುವ ಪರಿಸ್ಥಿತಿಗೆ ಬಂದಿದೆ. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಅನ್ನೋ ಥರ ಅದು ರಾಜಕಾರಣಿಗಳಿಂದ ತಳಮಟ್ಟದ ಅಧಿಕಾರಿಗಳಿಗೂ ಹರಡಿದೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.