ಶಿವಮೊಗ್ಗ : ಸಾಂಸ್ಕೃತಿಕ ನಾಡಹಬ್ಬ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಂತರಾಷ್ಟ್ರೀಯ ಖ್ಯಾತೀಯ ಸರೋದ್ ವಾದಕ ಪಂ. ರಾಜೀವ ತಾರಾನಾಥ ಬಳಿಯೇ ಅಧಿಕಾರಿಗಳು ಕಮಿಷನ್ ಕೇಳಿರುವ ಆರೋಪದ ಬಗ್ಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಲಾವಿದರ ಬಳಿ ಕಮಿಷನ್ ಕೇಳಿದವರು ಮತ್ತು ಅವರ ಮಕ್ಕಳು ಲಕ್ವಾ ಹೊಡೆದು ಸಾಯುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಲಾವಿದರ ಬಳಿ ಲಂಚ ಕೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ವಿರುದ್ಧ ತನಿಖೆ ಆಗಬೇಕು. ಕಲಾವಿದರ ಬಳಿ ಕಮೀಷನ್ ಕೇಳುವ ಮೂಲಕ ಅವಮಾನ ಮಾಡಿದ್ದಾರೆ. ಇವರು ಮತ್ತು ಇವರ ಮಕ್ಕಳು ಲಕ್ವಾ ಹೊಡೆದು ಸಾಯುತ್ತಾರೆ ಎಂದು ಹೇಳಿದ್ದಾರೆ.
ಸಿಎಂ ತವರು ಕ್ಷೇತ್ರದಲ್ಲಿ ಹೀಗಾಗುತ್ತೆ ಅಂದ್ರೆ?
ಮಹಿಷಾ ದಸರಾ ಆಚರಣೆಗೆ ಖಂಡನೆ. ಅರಸರ ಕಾಲದಿಂದ ಚಾಮುಂಡಿ ದಸರಾ ನಡೆದುಕೊಂಡು ಬಂದಿದೆ. ಹೀಗಿರುವಾಗ ಮಹಿಷಾ ದಸರಾ ನಡೆಸುವ ಅಗತ್ಯವೇನಿತ್ತು? ಮಹಿಷಾ ದಸರಾ ನಡೆಸುತ್ತೇವೆ ಅಂತ ಸುದ್ದಿಗೋಷ್ಠಿ ನಡೆಸಿದಾಗಲೇ ಅವರನ್ನು ಬಂಧಿಸಬೇಕಿತ್ತು. ಅದರ ಬದಲು ಮಹಿಷಾ ದಸರಾಗೆ ಅವಕಾಶ ನೀಡಿದ್ದು ತಪ್ಪು. ವಿದೇಶಿಗರು ಸೇರಿದಂತೆ ಸಾವಿರಾರು ಪ್ರವಾಸಿಗರಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಯಿತು. ಸಿಎಂ ತವರು ಕ್ಷೇತ್ರದಲ್ಲಿ ಹೀಗಾಗುತ್ತದೆ ಎಂದರೆ ಏನು ಹೇಳುವುದು? ಎಂದು ಪ್ರಶ್ನಿಸಿದ್ದಾರೆ.