ರಾಯಚೂರು : ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ‘ಸ್ವಚ್ಛ ಮಂತ್ರಾಲಯ’ ಅಭಿಯಾನದಲ್ಲಿ ಶ್ರೀಮಠದ ಪೀಠಾಧಿಪತಿ ಡಾ. ಸುಬುಧೇಂದ್ರ ತೀರ್ಥರು ಕಸಗುಡಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಶ್ರೀಮಠದಿಂದ ಸ್ವಚ್ಛ ಮಂತ್ರಾಲಯ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಭಕ್ತರು ಸ್ವಚ್ಛತೆಗೆ ಸಹಕರಿಸುವ ಮೂಲಕ ಸ್ವಚ್ಛ ಮಂತ್ರಾಲಯ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಮಹಾತ್ಮ ಗಾಂಧಿಯವರ ಕನಸಿನ ಭಾರತ ಸುಂದರವಾಗಿಸುವ ದೃಷ್ಟಿಯಿಂದ, ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹಮ್ಮಿಕೊಳ್ಳುತ್ತ ಬರಲಾಗುತ್ತಿದೆ. ಇದೇ ದೃಷ್ಟಿಯಿಂದ ತೀರ್ಥ ಕ್ಷೇತ್ರ ಮಠ ಮಂದಿರಗಳಲ್ಲಿನ ಸ್ವಚ್ಛತೆ ಕೊರತೆ ಇರುವುದನ್ನು ಮನಗಂಡು ಎರಡು ದಿನಗಳ ಕಾಲ ಸ್ವಚ್ಛ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
800ಕ್ಕೂ ಹೆಚ್ಚು ಸ್ವಯಂಸೇವಕರು ಭಾಗಿ
ಮಹದೇವಪುರ ಕ್ಷೇತ್ರದ ಮುಖಂಡರು ಕಾರ್ಯಕರ್ತರ ತಂಡ ಸ್ವಚ್ಛ ಮಂತ್ರಾಲಯ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ಈ ಒಂದು ಸ್ವಚ್ಛ ಮಂತ್ರಾಲಯ ಅಭಿಯಾನದಲ್ಲಿ 8 ನೂರಕ್ಕೂ ಹೆಚ್ಚು ಸ್ವಯಂಸೇವ ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಶ್ರೀಮಠದ ವ್ಯವಸ್ಥಾಪಕರಾದ ಎಸ್.ಕೆ. ಶ್ರೀನಿವಾಸರಾವ್, ವೆಂಕಟೇಶ ಜೋಷಿ, ಆಡಳಿತಾಕಾರಿ ಮಾಧವಶೆಟ್ಟಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.