ಬೆಂಗಳೂರು : ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟಪುಷ್ಟವಾಗಿ ಬೆಳಸಿದ ಕೋಣಗಳನ್ನ ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಇನ್ನು ಕರಾವಳಿ ಭಾಗದ ಜನರ ಮೈ-ಮನಸ್ಸು ಎಲ್ಲವೂ ಆಗಿರುವ ಕ್ರೀಡೆಯನ್ನು ರಾಜ್ಯ ರಾಜಧಾನಿಯಲ್ಲಿ ನಡೆಸಬೇಕು ಎಂಬುದು ಅದೆಷ್ಟೂ ಜನರ ಕನಸು.
ಇದೀಗ ಈ ಕನಸು ನನಸಾಗುವ ಕಾಲ ಬಂದಿದೆ. ಕರಾವಳಿ ಭಾಗದಿಂದ ಜೀವನ ಕಟ್ಟಿಕೊಳ್ಳಲೆಂದು ಬೆಂಗಳೂರಿಗೆ ಬಂದವರೆಲ್ಲಾ ತಮ್ಮ ಸಂಸ್ಕೃತಿಯನ್ನು ಬೆಂಗಳೂರಿಗರಿಗೆ ಪರಿಚಯ ಮಾಡಲು ಹೊರಟಿದ್ದಾರೆ.
ಬೆಂಗಳೂರು ತುಳುಕೂಟಕ್ಕೆ 50 ವರ್ಷ ತುಂಬಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಕಂಬಳ ಮಾಡಲು ಸಿದ್ದತೆ ನಡೆಸಲಾಗುತ್ತಿದೆ. ನವೆಂಬರ್ 24, 25 ಹಾಗೂ 26 ರಂದು ಕಂಬಳ ದಿನಾಂಕ ನಿಗದಿಯಾಗಿದೆ. ಈಗಾಗಲೇ ಅರಮನೆ ಮೈದಾನದಲ್ಲಿ ಕಂಬಳ ನಡೆಸಲು ಈಗಾಗಲೇ ಜಾಗ ಗುರುತು ಮಾಡಿದ್ದು, ಮಹಾರಾಣಿ ಹಾಗೂ ಸರ್ಕಾರದ ಬಳಿ ಎಲ್ಲಾ ರೀತಿಯ ಚರ್ಚೆಗಳಾಗಿ ಅನುಮತಿ ಪಡೆದುಕೊಳ್ಳಲಾಗಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿಯ ಎಲ್ಲಾ ಕಂಬಳ ಕಮಿಟಿ ಜೊತೆಯೂ ಸಹ ಮಾತುಕತೆಗಳಾಗಿವೆ. ಒಟ್ಟು 125 ರಿಂದ 150 ಜೋಡಿ ಕೋಣಗಳು ಉದ್ಯಾನನಗರಿ ಕೆಸರಿನಲ್ಲಿ ಓಡಾಲು ಸಿದ್ದವಾಗಿವೆ. ಕರಾವಳಿ ಭಾಗದಿಂದ ಬರುವ ಎಲ್ಲಾ ಕೋಣಗಳನ್ನು ಭರ್ಜರಿಯಿಂದ ಸ್ವಾಗತಿಸಲು ಎಲ್ಲಾ ಸಿಲಿಕಾನ್ ಸಿಟಿ ಮಂದಿ ಸಜ್ಜಾಗಿದ್ದಾರೆ. ಒಟ್ನಲ್ಲಿ, ಬೆಂಗಳೂರು ಕಂಬಳಕ್ಕೆ ದಿನಾಂಕ ಅಂತೂ ನಿಗದಿಯಾಗಿದ್ದು, ಕರಾವಳಿ ಕೋಣಗಳು ಬೆಂಗಳೂರಿನಲ್ಲಿ ತನ್ನ ಚಾಪು, ವಿಷೇಶತೆ ತೋರಿಸಲು ಸಜ್ಜಾಗಿವೆ.