ಬೆಂಗಳೂರು : ಇಂದು ಭಾರತ ರತ್ನ, ಹೆಮ್ಮೆಯ ಕನ್ನಡಿಗ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯರ ಜನ್ಮದಿನ. ಬಡತನಕ್ಕೆ ಸೆಡ್ಡು ಹೊಡೆದು ಸಾಧನೆಯ ಶಿಖರವನ್ನೇರಿದ ಕಟ್ಟಿ ಗಂಡು ನಮ್ಮ ಸರ್ಎಂವಿ. ಇವರ ಅನುಪಮ ಸೇವೆ ಮೆಚ್ಚಿ ಬ್ರಿಟಿಷ್ ಸರ್ಕಾರವೇ ‘ಕೈಸರ್-ಎ-ಹಿಂದ್’ ಬಿರುದು ನೀಡಿತ್ತು ಅಂದ್ರೆ ನೀವೆ ಊಹಿಸಿಕೊಳ್ಳಿ.
ಇಂಥ ಕರುನಾಡ ಕುಡಿ ಸರ್.ಎಂ. ವಿಶ್ವೇಶ್ವರಯ್ಯನವರು 1861 ಸೆಪ್ಟೆಂಬರ್ 15ರಂದು ಕೋಲಾರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದರು. ತಂದೆ ಶ್ರೀನಿವಾಸಶಾಸ್ತ್ರಿ, ಸಂಸ್ಕೃತ ವಿದ್ವಾಂಸರು. ತಾಯಿ ವೆಂಕಟಲಕ್ಷ್ಮಿ. ಚಿಕ್ಕಬಳ್ಳಾಪುರದ ಸರ್ಕಾರಿ ಶಾಲೆಯಲ್ಲಿ ವಿಶ್ವೇಶ್ವರಯ್ಯರ ಪ್ರಾಥಮಿಕ ವಿದ್ಯಾಭ್ಯಾಸ ಆರಂಭವಾಯಿತು. ಬಳಿಕ ನಡೆದಿದ್ದೆಲ್ಲ ಚರಿತ್ರೆ!
ಸರ್ಎಂವಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಬೆಂಗಳೂರಿನಿಂದ ಮುದ್ದೇನಹಳ್ಳಿಗೆ ೩೫ ಕಿ.ಮೀ. ನಡೆದುಕೊಂಡೇ ಹೋಗಿದ್ದರು. ಆಗ ತಾಯಿ ವೆಂಕಟಲಕ್ಷ್ಮಿ ಮನೆಯ ಪಾತ್ರೆ ಅಡವಿಟ್ಟು ಹಣ ಹೊಂದಿಸಿಕೊಟ್ಟಿದ್ದರು. ಆದರೆ, ಅವರಲ್ಲಿ ಬಡತನಕ್ಕೂ ಬಗ್ಗದ ಜೀವನೋತ್ಸಾಹವಿತ್ತು. ಬದುಕನ್ನು ಎದುರಿಸುವ ದಿಟ್ಟತನವಿತ್ತು. ಭವಿಷ್ಯದ ದೃಢ ಸಂಕಲ್ಪಗಳಿದ್ದವು. ಇದೇ ಸರ್ಎಂವಿ ಗಟ್ಟಿ ಗುಂಡಿಗೆ.
1955ರಲ್ಲಿ ‘ಭಾರತ ರತ್ನ’
ಸರ್ಎಂವಿ ಅವರು ಬೆಂಗಳೂರು, ಮದ್ರಾಸ್ ಮತ್ತು ಪುಣೆಯಲ್ಲಿ ವಿದ್ಯಾಭ್ಯಾಸ ಮಾಡಿ ಅಂದಿನ ಬ್ರಿಟೀಷ್ ಸರ್ಕಾರದಲ್ಲಿ ಸೇವೆ ಸಲ್ಲಿಸಿದರು. 1913ರಿಂದ ಮೈಸೂರಿನ ದಿವಾನರಾಗಿದ್ದ ಇವರಿಗೆ 1955ರಲ್ಲಿ ಭಾರತ ಸರ್ಕಾರವು ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತು. ಮಂಡ್ಯದ ಶ್ರೀರಂಗಪಟ್ಟಣದ ಬಳಿ ಕೆಆರ್ಎಸ್ ಜಲಾಶಯ ನಿರ್ಮಿಸಿದ್ದ ಇವರು, ಅಪಾರ ಖ್ಯಾತಿ ಗಳಿಸಿದ್ದರು.
ಸರ್ಎಂವಿ ನುಡಿಮುತ್ತು
‘ಯಾವುದೇ ಕೆಲಸ ಕೀಳಲ್ಲ. ನಿನ್ನ ಕೆಲಸ ಈ ರಸ್ತೆಯ ಈ ಭಾಗವನ್ನು ಗುಡಿಸುವುದಾಗಿದ್ದರೆ, ಜಗತ್ತಿನ ಅತ್ಯಂತ ಸ್ವಚ್ಚ ರಸ್ತೆಯಾಗುವಂತೆ ಗುಡಿಸು. ಅದೃಷ್ಟ ಎನ್ನುವುದು ದೇವರ ಕೈಯಲ್ಲಿ ನಿಷ್ಕ್ರಿಯವಾಗಿರುವ ಸಾಧನವಲ್ಲ. ನಮ್ಮ ಡೆಸ್ಟಿನಿ, ನಮ್ಮ ವಿಧಿ-ಮನುಷ್ಯನ ಕೈಯಲ್ಲಿರುವ ಸಾಧನ’
- ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ.