ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಸಾಮರ್ಥ್ಯ, ವಿಶ್ವಾಸಪೂರ್ಣ ಸ್ಪಂದನೆಗೆ ಇಡೀ ವಿಶ್ವವೇ ಮೆಚ್ಚುಗೆ ಸೂಚಿಸುತ್ತಿದೆ ಎಂದು ಶಿಕಾರಿಪುರ ಬಿಜೆಪಿ ಶಾಸಕ ಬಿ.ವೈ ವಿಜಯೇಂದ್ರ ಬಣ್ಣಿಸಿದ್ದಾರೆ.
ಜಿ-20 ಶೃಂಗಸಭೆ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಧಾನಿ ಮೋದಿ ಅವರನ್ನು ಕೊಂಡಾಡಿದ್ದಾರೆ. ಆತಿಥ್ಯ ಸಂಸ್ಕೃತಿ ಭಾರತದ ಹೆಮ್ಮೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಿ-20 ಶೃಂಗಸಭೆ ಆಯೋಜಿಸಿ ವಿಶ್ವ ಮಟ್ಟದಲ್ಲಿ ಭಾರತ ತನ್ನ ಘನತೆ ಸಾರುತ್ತಿದೆ ಎಂದು ಹೇಳಿದ್ದಾರೆ.
ಶಾಂತಿ, ಸಾಮರಸ್ಯಕ್ಕಾಗಿ ಜಾಗತಿಕ ಮಟ್ಟದ ಒಗ್ಗಟ್ಟು ಪ್ರದರ್ಶಿಸಿ ಸಂಘರ್ಷ ರಹಿತ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಮಾನವ ಕೇಂದ್ರಿತ ಅಭಿವೃದ್ಧಿಗಾಗಿ ಸಂಘಟಿತ ಸಂಕಲ್ಪ ತೊಡಲಾಗಿದೆ. “ವಸುದೈವ ಕುಟುಂಬಕಂ” ಸಂದೇಶ ವಿಶ್ವ ಪಸರಿಸುವ ನಿಟ್ಟಿನಲ್ಲಿ ಜಿ-20 ಶೃಂಗಸಭೆ ‘ಒಂದು ಭೂಮಿ, ಒಂದು ಕುಟುಂಬ’ಎಂಬ ಘೋಷಣೆ ಮೊಳಗಿಸಲಾಗಿದೆ ಎಂದಿದ್ದಾರೆ.
ಐತಿಹಾಸಿಕ ಸುದಿನಕ್ಕೆ ಭಾರತ ಸಾಕ್ಷಿ
ಆ ಮೂಲಕ ಭಾರತ, ಮಾನವ ಕಂಟಕ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿದು ಭವಿಷ್ಯದ ಪೀಳಿಗೆಗೆ ಸುಂದರ ಜಗತ್ತನ್ನು ನಿರ್ಮಿಸಿಕೊಡುವ ಹೊಣೆಗಾರಿಕೆ ಹೊತ್ತು ಮಹತ್ವಪೂರ್ಣ ಹೆಜ್ಜೆ ಇಡುತ್ತಿದೆ. ಇಂಥಾ ಐತಿಹಾಸಿಕ ಸುದಿನಕ್ಕೆ ಭಾರತದ ನೆಲ ಸಾಕ್ಷಿಯಾಗಲಿದೆ. ಹೀಗಾಗಿ, ಭಾರತದ ನಾಯಕತ್ವದ ಸಾಮರ್ಥ್ಯ, ವಿಶ್ವಾಸಪೂರ್ಣ ಸ್ಪಂದನೆಗೆ ಇಡೀ ವಿಶ್ವವೇ ಮೆಚ್ಚುಗೆ ಸೂಚಿಸುತ್ತಿದೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.