ಬೆಂಗಳೂರು : ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಮ್ಮ ಅಪ್ಪ-ಅಮ್ಮನಿಗೆ ಹುಟ್ಟಿದ್ದೇನೆ ಎಂಬ ನಟ ಪ್ರಕಾಶ್ ರಾಜ್ ಹೇಳಿಕೆಗೆ ಮಾಜಿ ಸಿಎಂ ಡಿ.ವಿ ಸದಾನಂದ ಗೌಡ ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹುಚ್ಚ ಕೂಡ ಪ್ರಕಾಶ್ ರಾಜ್ ಗಿಂತ ಚೆನ್ನಾಗಿ ಮಾತನಾಡ್ತಾನೆ. ಹುಚ್ಚುತನದ ಪರಮಾವಧಿ ಅವರಲ್ಲಿದೆ ಎಂದು ಕುಟುಕಿದ್ದಾರೆ.
ಅವರಿಗೆಲ್ಲ ನಾಟಕ ಮಾಡಿ ಅಭ್ಯಾಸ. ಚಿತ್ರಗಳಲ್ಲಿ ಆಕ್ಟ್ ಮಾಡಿ ಅವರಿಗೆ ಅಭ್ಯಾಸವೇ ಹೊರತು ಅವರ ಹುಟ್ಟಿನ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ. ಕೇವಲ ಬಾಲಿಶ ಮಾತುಗಳನ್ನಾಡುವುದು ಇಂಥ ದೊಡ್ಡ ವ್ಯಕ್ತಿಗಳಿಗೆ ಗೌರವ ತರಲ್ಲ. ಅವರ ಹಿರಿಯರು ಯಾರು ಅಂತ ಗೊತ್ತಿಲ್ಲ ಅಂದ್ರೆ ಇದು ಅವರ ಹುಚ್ಚುತನದ ಪರಮಾವಧಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಪರಮೇಶ್ವರ್ ಹೆಸರಲ್ಲೇ ಈಶ್ವರ ಇದ್ದಾನೆ : ವಿಜಯೇಂದ್ರ
ಹಿಂದೂ ಧರ್ಮದ ಬೇರು ಆಳವಾಗಿದೆ
ಹಿಂದೂ ಧರ್ಮ ಹುಟ್ಟು ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಹಿಂದೂ ಧರ್ಮದ ವ್ಯವಸ್ಥೆಯ ಮೂಲ ಸ್ವರೂಪ ರಾಮಾಯಣ, ಮಹಾಭಾರತದಲ್ಲಿದೆ. ಹಿಂದೂ ಧರ್ಮದ ಬೇರು ಆಳವಾಗಿದೆ, ಯಾರಿಂದಲೂ ಕಂಡು ಹಿಡಿಯಲು ಆಗಲ್ಲ. ಪರಮೇಶ್ವರ್ ಅವರಿಂದಲೂ ಕಂಡಿಹಿಡಿಯಲು ಸಾಧ್ಯವಿಲ್ಲ. ಹಿಂದೂ ಧರ್ಮದಲ್ಲಿ ಹುಟ್ಟಿದ ವ್ಯಕ್ತಿ ಧರ್ಮದ ವಿಚಾರ ಮಾತಾಡುವಾಗ ಪರಿಜ್ಞಾನ ಇಟ್ಟು ಮಾತಾಡಲಿ ಎಂದು ಕಿಡಿಕಾರಿದ್ದಾರೆ.
ಇಂಡಿಯಾಗೆ ಭಾರತ್ ಹೆಸರು ವಿಚಾರವಾಗಿ ಮಾತನಾಡಿ, ಭಾರತದಲ್ಲಿ ರಾಜಕೀಯ ಹಿನ್ನೆಲೆಯಲ್ಲಿ ಭಾರತ ಹೆಸರು ಒಪ್ತಿಲ್ಲ. ಇವತ್ತು ಭಾರತ ಅಂತ ಕರೆಯುವ ಕಾಲ ಬಂದಿದೆ ಎಂದು ಸದಾನಂದ ಗೌಡ ಹೇಳಿದ್ದಾರೆ.