Friday, November 22, 2024

ಗ್ಯಾರಂಟಿ ಯೋಜನೆ ಎಷ್ಟು ವರ್ಷ ಇರ್ತಾವೆ ನೋಡೋಣ : ಹೆಚ್.ಡಿ ದೇವೇಗೌಡ

ಹಾಸನ : ಮೂರು ಅಥವಾ ನಾಲ್ಕು ತಿಂಗಳಲ್ಲೇ ಕಾಂಗ್ರೆಸ್​ ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಾಖ್ಯಾನಿಸುವ ಪರಿಸ್ಥಿತಿ ಬರಬಹುದು ಎಂದು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರು ಕುಟುಕಿದರು.

ಹಾಸನದಲ್ಲಿ ಮಾತನಾಡಿರುವ ಅವರು, ಈ ಯೋಜನೆಗಳು ಎಷ್ಟು ವರ್ಷ ಇರುತ್ತವೆ ಅಂತ ನೋಡೋಣ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಗೃಹಲಕ್ಷ್ಮಿ ಯೋಜನೆ ಚಾಲನೆ ವೇಳೆ ಚಾಮುಂಡೇಶ್ವರಿಗೂ 2 ಸಾವಿರ ಕೊಟ್ಟಿದ್ದಾರೆ. ಚಾಮುಂಡಿನೂ ಹೆಣ್ಣು ದೇವತೆ, ಆ ತಾಯಿಗೂ 2 ಸಾವಿರ ಕೊಟ್ಟಿದ್ದಾರೆ. ಅವರು ಹುಂಡಿಗೆ ಹಣ ಹಾಕಲಿಲ್ಲ. ಆ ತಾಯಿಗೆ ಹಣ ಕೊಟ್ಟು ಯೋಜನೆಗೆ ಶಕ್ತಿ ತುಂಬಲು ಬೇಡಿದ್ದಾರೆ ಎಂದು ನುಡಿದರು.

ಬಿಜೆಪಿ ಅಕ್ರಮಗಳ ಬಗ್ಗೆ ತನಿಖೆ ಮಾಡುತ್ತೇವೆ ಎಂದಿದ್ದ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕಳೆದ ಮೂರು ತಿಂಗಳಿಂದ ಬಿಜೆಪಿ ಅಕ್ರಮಗಳ ಬಗ್ಗೆ ತನಿಖೆ‌ ಮಾಡುತ್ತೇವೆ ಅಂತ ತಮಟೆ ಹೊಡೆದ್ರು. ಮಾಡಬೇಡಿ‌ ಅಂತ ಹಿಡ್ಕೊಂಡಿರೋರು ಯಾರು? ಬಿಟ್ ಕಾಯಿನ್ ಬಗ್ಗೆ ತನಿಖೆ ಮಾಡುತ್ತೇವೆ ಅಂದ್ರಿ ಬೇಡ ಅಂದಿದ್ಯಾರು? ಎಂದು ಪ್ರಶ್ನಿಸಿದರು.

ಬಿಬಿಎಂಪಿಯಲ್ಲಿ ಎಷ್ಟು ಅಕ್ರಮ ನಡೆದಿದೆ

ಬಿಬಿಎಂಪಿಗೆ ಎರಡು ಬಾರಿ‌ ಕಾಂಗ್ರೆಸ್​ಗೆ ಬೆಂಬಲ ಕೊಟ್ವಿ. ಬಿಬಿಎಂಪಿಯಲ್ಲಿ ಎಷ್ಟು ಅಕ್ರಮ ನಡೆದಿದೆ, ತನಿಖೆ ಮಾಡ್ತಿವಿ ಅಂದ್ರಿ. ಈಗ ನಿಮ್ಮ ಪಕ್ಷವೇ ಅಧಿಕಾರದಲ್ಲಿ ಇದೆ. ಬಸವರಾಜ ಬೊಮ್ಮಾಯಿ ಕೂಡ ತನಿಖೆ ಮಾಡಿ ಅಂತ ಹೇಳಿದ್ದಾರೆ. ನೀವೆ ಹೇಳಿದ್ರಿ, ಯಾಕೆ ತನಿಖೆ ಮಾಡ್ಲಿಲ್ಲ ಎಂದು ಚಾಟಿ ಬೀಸಿದರು.

ಜಲಾಶಯ, ನೀರಾವರಿ ವಿವರ ಕೊಡ್ತಿಲ್ಲ

ನೀರಾವರಿ ಮಂತ್ರಿಗಳು ಯಾವುದೇ ಮಾಹಿತಿಯನ್ನು ಹೊರ ಹಾಕದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ನಾನು ಇಷ್ಟು ವರ್ಷ ಹೋರಾಟ ಮಾಡಿದ್ದೇವೆ. ಎಲ್ಲಾ ಜಲಾಶಯ, ನೀರಾವರಿ ವಿವರವನ್ನು ಅಧಿಕಾರಿಗಳು ಕೊಡ್ತಿಲ್ಲ. ನಮ್ಮ ಸಚಿವರು ಕಟ್ಟುನಿಟ್ಟಾಗಿ ಮಾಹಿತಿ ನೀಡದಂತೆ ಹೇಳಿದ್ದರೆ ಎನ್ನುತ್ತಾರೆ ಎಂದು ದೇರ್ವಗೌಡ್ರು ಅಸಮಾಧಾನ ಹೊರಹಾಕಿದರು.

RELATED ARTICLES

Related Articles

TRENDING ARTICLES