ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ಅವರು ತಂದೆ ಸ್ಥಾನದಲ್ಲಿ ಇದ್ದಂತೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೋದಿಯವರು ಬಂದದ್ದು ಪ್ರಚಾರಕ್ಕೆ. ಇಸ್ರೋ ಸಾಧನೆ ಮೆಚ್ಚಲೇಬೇಕು ಎಂದು ಕುಟುಕಿದರು.
ನಮ್ಮ ಸಮಾಜದವರು ಇದ್ದದ್ದು ಬಹಳ ಖುಷಿಯಾಗುತ್ತೆ. ನಮ್ಮ ಸಿಎಂ ಕೂಡ ಹೋಗಿ ಅಭಿನಂದಿಸಿದ್ದಾರೆ. ಹೋಗದೇ ಇದ್ದವರು ಹರ್ಷ ವ್ಯಕ್ತಪಡಿಸಿದ್ದಾರೆ. ಮಣಿಪುರದಲ್ಲಿ ಅಷ್ಟೊಂದು ಜನ ಸಾಯಬೇಕಾದರೆ ಹೋಗಿಲ್ಲ. ರಾಕೆಟ್ ಬಿಟ್ಟ ತಕ್ಷಣ ಹೋಗ್ತಾರೆ. ಆದರೆ, ಅದು ತಪ್ಪು ಅಂತ ಹೇಳೊಲ್ಲ. ಮಣಿಪುರಕ್ಕೆ ಹೋದರೆ ಕಡಿಮೆ ಆಗ್ತಿತ್ತು ಎಂದು ಛೇಡಿಸಿದರು.
ಬ್ಯಾರಿಕೇಡ್ ಹೊರಗಡೆ ನಿಲ್ಲುವಷ್ಟು ಪುಣ್ಯ
ಪ್ರಧಾನಿ ಮೋದಿ ಸ್ವಾಗತಕ್ಕೆ ಬಿಜೆಪಿ ಮುಖಂಡರ ಸ್ಥಿತಿ ವಿಚಾರವಾಗಿ ಮಾತನಾಡಿದ ಅವರು, ಬ್ಯಾರಿಕೇಡ್ ಹೊರಗಡೆ ನಿಲ್ಲುವಷ್ಟು ಪುಣ್ಯ ಸಿಕ್ಕಿದೆ. ಎನ್ಇಪಿ (NEP)ಮೂಲಕ ಕೆಟ್ಟ ಆಲೋಚನೆ ಮಕ್ಕಳಲ್ಲಿ ತುಂಬಿಸ್ತಾರೆ. ಪ್ರತಿ ರಾಜ್ಯದ ಸಂಸ್ಕೃತಿ, ಸಂಪ್ರದಾಯ ಭಿನ್ನ. ಆದರೆ, ನಾವೆಲ್ಲ ಭಾರತೀಯರು. ಉತ್ತರದ ವಿಚಾರ ನಮ್ಮ ರಾಜ್ಯದಲ್ಲಿ ಸೇರಿಸುವುದು ಸರಿಯಲ್ಲ ಎಂದು ಚಾಟಿ ಬೀಸಿದರು.
ಡಬಲ್ ಎಂಜಿನ್ ಅಂತಾನೇ ಬಂತು
ನಮ್ಮ ರಾಜ್ಯದಿಂದ ಟ್ಯಾಕ್ಸ್ ಕಲೆಕ್ಷನ್ ಆಗ್ತಿದೆ. ಅನುದಾನ ಯಾಕೆ ಕೊಡ್ತಾ ಇಲ್ಲ? ಹಿಂದಿನ ಸರ್ಕಾರ ಡಬಲ್ ಎಂಜಿನ್ ಅಂತಾನೇ ಬಂತು. ಆದರೆ, ಅನುದಾನ ಹೆಚ್ಚಿಗೆ ತರಲು ಆಗಿಲ್ಲ. ನಾವು ಕೇಂದ್ರಕ್ಕೆ ಹೆಚ್ಚಿನ ಅನುದಾನ ಕೇಳ್ತಾ ಇದ್ದೇವೆ. ಈಗಾಗಲೇ ಸಂಪರ್ಕ ಮಾಡಿದ್ದೇವೆ. ಸದ್ಯದಲ್ಲೇ ಕೇಂದ್ರ ಶಿಕ್ಷಣ ಸಚಿವರನ್ನು ಭೇಟಿ ಆಗ್ತೇನೆ ಎಂದು ಮಧು ಬಂಗಾರಪ್ಪ ಹೇಳಿದರು.