ರಾಮನಗರ : ಜಿಲ್ಲೆಗೆ ಸಂಸದ ಸುರೇಶ್ ಅವರ ಕೊಡುಗೆ ಏನಿದೆ? ನಮ್ಮ ಋಣ ಡಿ.ಕೆ ಸುರೇಶ್ ಮೇಲಿದೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸಹಕಾರದಿಂದ ನೀವು ಗೆದ್ದಿದ್ದೀರಾ ಎಂದು ಮಾಜಿ ಶಾಸಕ ಎ. ಮಂಜುನಾಥ್ ಕುಟುಕಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ಡಿ.ಕೆ ಸುರೇಶ್ ಅವರಿಗೆ ರಾಮನಗರದಲ್ಲಿ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಅವರ ಬಗ್ಗೆ ಮಾತಾಡಬೇಕಾದ್ರೆ ಎಚ್ಚರ ಇರಲಿ ಎಂದಿದ್ದಾರೆ.
ಜಿಲ್ಲೆಯ ಅಭಿವೃದ್ಧಿಯಲ್ಲಿ ಕುಮಾರಸ್ವಾಮಿ ಅವರ ಪಾತ್ರ ಹೆಚ್ಚಿದೆ. ಚುನಾವಣಾ ಬರ್ತಿದೆ ಅಂತ ನಿಮ್ಮ ಸಾಧನೆ ಹೇಳದೇ, ನಮ್ಮ ಕಾಲದಲ್ಲಿ ಆಗಿರುವ ಕೆಲಸಗಳನ್ನು ತೋರಿಸಿ ಅಭಿವೃದ್ಧಿ ಮಾಡಿದ್ದೀನಿ ಅಂತೀರಾ? ರಾಮನಗರದ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ತೆಗೆದುಕೊಂಡು ಹೋಗ್ತಾ ಇದ್ದೀರಾ ಎಂದು ಗುಡುಗಿದ್ದಾರೆ.
ಕಾಂಗ್ರೆಸ್ಗೆ ಕುಮಾರಸ್ವಾಮಿ ಸಿಂಹಸ್ವಪ್ನ
ಕಾಂಗ್ರೆಸ್ ಪಕ್ಷಕ್ಕೆ ಕುಮಾರಸ್ವಾಮಿ ಸಿಂಹಸ್ವಪ್ನವಾಗಿದ್ದಾರೆ. ಹಾಗಾಗಿ, ಕಾಂಗ್ರೆಸ್ಸಿಗರು ಈ ರೀತಿ ಹೇಳಿಕೆ ಕೊಡ್ತಾ ಇದ್ದಾರೆ. ಪೆನ್ ಡ್ರೈವ್ ನಲ್ಲಿ ಎಲ್ಲ ಸಾಕ್ಷ್ಯಾಧಾರ ಇದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲದರ ಬಗ್ಗೆ ಚರ್ಚೆ ಮಾಡಲಾಗುತ್ತದೆ. ನಮ್ಮ ನಾಯಕರನ್ನು ನಾವು ಬಿಟ್ಟುಕೊಡುವ ಪ್ರಶ್ನೆ ಇಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ ಸುರೇಶ್ ಅವರಿಗೆ ಜನ ಉತ್ತರ ಕೊಡ್ತಾರೆ ಎಂದು ಚಾಟಿ ಬೀಸಿದ್ದಾರೆ.
ನೈಸ್ ಕಂಪನಿಯಲ್ಲಿ ಡಿಕೆಶಿ ಪಾಲೂ ಇದೆ
ನೈಸ್ ರಸ್ತೆ ವಿಚಾರವಾಗಿ ಮಾತನಾಡಿ, ಈ ಹಿಂದೆ ದೇವೆಗೌಡರು ಸಿಎಂ ಆಗಿದ್ದಾಗ ಯೋಜನೆಗೆ ಅನುಮೋದನೆ ಕೊಟ್ಟಿದ್ದರು. ನಂತರ ಯೋಜನೆ ವಿಚಾರವಾಗಿ ರೈತರು ಕೋರ್ಟ್ ಮೆಟ್ಟಿಲೇರಿದ್ದರು. ಕಡಿಮೆ ಹಣಕ್ಕೆ ಜಮೀನು ಕೊಡಬೇಕೆಂದು ರೈತರಿಗೆ ಡಿಕೆ ಬ್ರದರ್ಸ್ ಹೆದರಿಸುತ್ತಿದ್ದಾರೆ. ನೈಸ್ ರಸ್ತೆ ವಿಚಾರವಾಗಿ ಡಿ.ಕೆ ಶಿವಕುಮಾರ್ ಇದೀಗ ಹೊಸ ಕಮಿಟ್ಮೆಂಟ್ ಮಾಡ್ಕೊಂಡಿದ್ದಾರೆ. ನೈಸ್ ಕಂಪನಿಯಲ್ಲಿ ಡಿಕೆಶಿ ಪಾಲು ಕೂಡ ಇದೆ. ಮುಂದಿನ ದಿನಗಳಲ್ಲಿ ಈ ಎಲ್ಲದರ ಬಗ್ಗೆ ಕುಮಾರಸ್ವಾಮಿ ಅವರು ಹೋರಾಟ ಮಾಡ್ತಾರೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.