ಮನರಂಜನೆಯೊಂದೇ ಸಿನಿಮಾದ ಉದ್ದೇಶವಲ್ಲ. ಸಮಾಜದ ಅಂಕು ಡೊಂಕುಗಳನ್ನ ತಿದ್ದಿ ತೀಡುವುದು ಕೂಡ ಪವರ್ಫುಲ್ ಮಾಧ್ಯಮದ ಕರ್ತವ್ಯ. ಆ ನಿಟ್ಟಿನಲ್ಲಿ ಈ ವಾರ ತೆರೆಕಂಡ ಕ್ಷೇತ್ರಪತಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದೆ. ಅಣ್ಣಾವ್ರ ಬಂಗಾರದ ಮನುಷ್ಯ ಚಿತ್ರದಿಂದ ಈ ಕಾಲಘಟ್ಟಕ್ಕೆ ಹೊಸ ಆಯಾಮ ಕೊಟ್ಟಿದೆ. ಉತ್ತರ ಕರ್ನಾಟಕದ ಕಥೆ, ಅಲ್ಲಿನ ಪ್ರತಿಭೆಗಳಿಂದಲೇ ಎಲ್ಲೆಡೆಯಿಂದ ಭರ್ಜರಿ ರಿವ್ಯೂವ್ಸ್ ಪಡೆಯುತ್ತಿದೆ. ಇಷ್ಟಕ್ಕೂ ಕೃಷಿ ಅನ್ನೋ ಖುಷಿ ಹಿಂದಿನ ಕಷ್ಟ ಕಾರ್ಪಣ್ಯಗಳೇನು..? ರೈತರ ಆತ್ಮಹತ್ಯೆ ಹಾಗೂ ಅವುಗಳಿಗೆ ಪರಿಹಾರಗಳೇನು ಅನ್ನೋದ್ರ ಜೊತೆಗೆ ಕ್ಷೇತ್ರಪತಿಯ ಕಂಪ್ಲೀಟ್ ರಿವ್ಯೂ ಇಲ್ಲಿದೆ.
ಈ ಚಿತ್ರದ ತಾರಾಗಣದಲ್ಲಿ : ನವೀನ್ ಶಂಕರ್, ಅರ್ಚನಾ ಜೋಯಿಸ್, ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಾಶರೀ ಅರಸ್, ನಾಟ್ಯ ರಂಗ, ಹರ್ಷ ಅರ್ಜುನ್ ಮುಂತಾದವರು.
ಕಾಲೇಜ್ನಲ್ಲಿ ಸದಾ ಅಮೆರಿಕಾ ಕನಸು ಕಾಣ್ತಾ ಕೂರುವ ಇಂಜಿನಿಯರಿಂಗ್ ಸ್ಟೂಡೆಂಟ್ ಬಸವ. ಆತನನ್ನ ಇಂಜಿನಿಯರ್ ಮಾಡಲು ಗದಗ ಮೂಲದ ತಿಮ್ಮಾಪುರ ಗ್ರಾಮದ ಅವ್ರ ತಂದೆ, ಕೃಷಿಗಾಗಿ ಸಾಲ ಮಾಡ್ಕೊಂಡು, ಅದನ್ನ ತೀರಿಸಲಾಗದೆ ಜೀವ ತೆರಬೇಕಾಗುತ್ತೆ. ತಂದೆಯ ಅಂತ್ಯಕ್ರಿಯೆಗೆ ಬರುವ ಬಸವ, ಊರಲ್ಲೇ ಉಳಿದು ಒಕ್ಕಲುತನ ಮಾಡಲು ಮುಂದಾಗ್ತಾನೆ. ಆದ್ರೆ ಅಲ್ಲಿನ ಸಾಹುಕಾರ, ಊರವರಿಗೆಲ್ಲಾ ಸಾಲ ನೀಡಿ, ತನ್ನ ತಾಳಕ್ಕೆ ತಕ್ಕನಾಗಿ ಕುಣಿಯುವಂತೆ ಮಾಡಿಕೊಂಡಿರ್ತಾನೆ. ತಮ್ಮದೇ ದವಸ, ಧ್ಯಾನ್ಯಗಳಿಗೆ ಸಾಹುಕಾರನ ಆಜ್ಞೆ ಇಲ್ಲದೆ ಮಾರುವಂತಿಲ್ಲ ಅನ್ನೋದು ನಾಯಕನಟ ಬಸವನನ್ನ ಕೆರಳಿಸುತ್ತೆ. ಅಲ್ಲಿಂದ ಶುರುವಾಗೋ ಕಿಚ್ಚು, ಮುಂದೆ ಆತ ಕ್ರಾಂತಿಗೆ ಮುನ್ನುಡಿ ಬರೆಯುವಂತಾಗುತ್ತೆ. ಬಸವನಿಗೆ ಪ್ರಜಾಧ್ವನಿ ಪೇಪರ್ ಬೆಂಬಲವೂ ಸಿಗುತ್ತೆ. ಜನರನ್ನ ಜಾಗೃತಗೊಳಿಸಿ, ಸಾಹುಕಾರ ವಿರುದ್ಧ ಸಮರ ಸಾರುತ್ತಾನೆ.
ಮೊದಲಾರ್ಧ ಹೀಗೆ ಎಮೋಷನಲ್ ಆಗಿ ಸಾಗಿದ್ರೆ, ದ್ವಿತಿಯಾರ್ಧ ಮತ್ತಷ್ಟು ವೇಗ ಪಡೆದುಕೊಳ್ಳುತ್ತೆ. ರೈತರ ಅಸಲಿ ಸಮಸ್ಯೆಗಳು, ಅದಕ್ಕಾಗಿ ವ್ಯವಸ್ಥೆ ಆಡುವ ಆಟಗಳು, ಕೊನೆಗೆ ಬಲಿಯಾಗೋದು ಮಾತ್ರ ರೈತನೇ. ಹಾಗಾಗಿ ಆ ಅವ್ಯವಸ್ಥೆಯ ವಿರುದ್ಧ ಸಿಡಿದೇಳುವ ಕ್ರಾಂತಿಕಾರಿ ಯುವಕ, ತಮ್ಮ ಬೆಳೆಗಳಿಗೆ ತಾವೇ ಸ್ಥಿರವಾದ ಲಾಭದಾಯಕ ಬೆಲೆ ಪಡೆಯಬೇಕು ಅಂತ ಹೋರಾಟಕ್ಕೆ ಇಳಿಯುತ್ತಾನೆ. ಯೂತ್ ಸೆನ್ಸೇಷನ್ ಆಗಿ ಯಾವುದೇ ಗಿಮಿಕ್ ಇಲ್ಲದೆ, ಎಪಿಎಂಸಿ ಎದುರೇ ರೈತ ಮಾರುಕಟ್ಟೆ ಆರಂಭಿಸ್ತಾನೆ. ಅದಕ್ಕೆ ಸುದ್ದಿ ವಾಹಿನಿಯೊಂದರ ಸಂದರ್ಶನ, ಅದ್ರ ನಿರೂಪಕಿ ನೆರವಾಗ್ತಾರೆ. ಮುಂದೆ ಆತನನ್ನ ಹತ್ತಿಕ್ಕಲು ಹಾಗೂ ಆತನ ಪ್ರಯತ್ನಗಳನ್ನ ವಿಫಲಗೊಳಿಸಲು ಸಾಹುಕಾರ, ಸಿಎಂ ಜೊತೆಗೂಡಿ ಮಾಡುವ ಕುತಂತ್ರಗಳೇನು..? ಜೀವ ಪಣಕ್ಕಿಟ್ಟು ಆತ ನಿಜಕ್ಕೂ ಅವೆಲ್ಲವನ್ನ ಗೆಲ್ಲುತ್ತಾನಾ ಅನ್ನೋದನ್ನ ನೀವು ಥಿಯೇಟರ್ನಲ್ಲೇ ನೋಡಬೇಕು.
ನಾಯಕನಟ ಬಸವ ಪಾತ್ರಕ್ಕಾಗಿ ಪರಕಾಯ ಪ್ರವೇಶ ಮಾಡುವ ಮೂಲಕ ಗುಳ್ಟು ನವೀನ್ ಶಂಕರ್, ಇಡೀ ಸಿನಿಮಾದ ಕೇಂದ್ರಬಿಂದುವಾಗಿದ್ದಾರೆ. ಎಮೋಷನಲ್ ಹಾಗೂ ಆಕ್ರೋಶಭರಿತ ದೃಶ್ಯಗಳಲ್ಲಿ ಬಹಳ ಸರಳ ಹಾಗೂ ಸ್ವಾಭಾವಿಕವಾದ ನಟನೆಯಿಂದ ಎಲ್ಲರ ದಿಲ್ ದೋಚುತ್ತಾರೆ. ಉತ್ತರ ಕರ್ನಾಟಕ ಭಾಗದಿಂದ ಸ್ಟಾರ್ಗಳಿಲ್ಲ ಅನ್ನೋ ಮಾತಿತ್ತು. ಆ ಕೊರಗನ್ನ ನೀಗಿಸಿದ್ದಾರೆ ನವೀನ್ ಶಂಕರ್. ರೈತರ ಪರ ನಿಲ್ಲುವ ಕ್ರಾಂತಿಕಾರಿ ಯುವಕನಾಗಿ, ಸಮಾಜದ ಬದಲಾವಣೆಗೆ ನಾಂದಿ ಹಾಡುವ ಹರಿಕಾರನಾಗಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸುತ್ತಾರೆ.
ಹೊಂದಿಸಿ ಬರೆಯಿರಿ ಚಿತ್ರದ ನಂತ್ರ ಮತ್ತೊಮ್ಮೆ ನವೀನ್ ಜೊತೆ ತೆರೆಹಂಚಿಕೊಂಡ ಅರ್ಚನಾ ಜೋಯಿಸ್, ನಾಯಕನಟಿಯಾಗಿ ಮನೋಜ್ಞ ಅಭಿನಯ ನೀಡಿದ್ದಾರೆ. ಟಿವಿ ನಿರೂಪಕಿಯಾಗಿ, ಯೂಟ್ಯೂಬರ್ ಆಗಿ ತನ್ನ ಕೆಲಸವನ್ನು ಬಹಳ ನಿಷ್ಠೆಯಿಂದ ಮಾಡುವ ಜರ್ನಲಿಸ್ಟ್ ಆಗಿ ಕಾಣಸಿಕೊಂಡಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್ ಒಂದು ಪತ್ರಿಕೆಯ ಎಡಿಟರ್ ಆಗಿ, ವಿಲನ್ಗಳಾಗಿ ರಾಹುಲ್ ಐನಾಪುರ ಹಾಗೂ ಹರ್ಷ ಅರ್ಜುನ್ ಗಮನ ಸೆಳೆಯುತ್ತಾರೆ.
ಇದರಲ್ಲಿ ಮನರಂಜನೆಗಿಂತ ಮನೋವಿಕಾಸದ ಅಂಶಗಳೇ ಹೆಚ್ಚಾಗಿ ಕೂಡಿದ್ದು, ನೋಡುಗರ ಮನಸ್ಸುಗಳಿಗೆ ನಾಟುವಂತಿದೆ. ಆದ್ರೆ ಚಿತ್ರದ ಕಾಲಾವಧಿ ಸಾಮಾನ್ಯ ಡ್ಯುರೇಷನ್ಗಿಂತ ಜಾಸ್ತಿ ಇದೆ. ಸುಮಾರು 157 ನಿಮಿಷಗಳಷ್ಟು ದೊಡ್ಡ ಸಿನಿಮಾ ಆಗಿರೋದ್ರಿಂದ ದ್ವಿತಿಯಾರ್ಧ ಕೊಂಚ ತಾಳ್ಮೆಯಿಂದ ನೋಡಬೇಕಿದೆ. ಆದ್ರೂ ಸಹ ನೋಡುಗರನ್ನ ಎಂಗೇಜ್ ಆಗಿ ಇಡೋಕೆ ಪ್ರಯತ್ನಿಸಿದ್ದಾರೆ ನಿರ್ದೇಶಕರು.
ಬಹುಶಃ ನಟಸಾರ್ವಭೌಮ ಡಾ. ರಾಜ್ಕುಮಾರ್ ನಟನೆಯ ಬಂಗಾರದ ಮನುಷ್ಯ ಚಿತ್ರದ ಬಳಿಕ ಕೃಷಿ ಹಾಗೂ ಕೃಷಿಕನ ಬಗ್ಗೆ ಇಷ್ಟೊಂದು ಸುದೀರ್ಘವಾಗಿ ಹಾಗೂ ಸಮಗ್ರವಾಗಿ ಮಾಡಿರೋ ಮತ್ತೊಂದು ಸಿನಿಮಾ ಕ್ಷೇತ್ರಪತಿಯೇ ಅನಿಸುತ್ತೆ. ಗ್ರಾಮೀಣ ಪ್ರದೇಶಗಳಿಂದ ಬಂದಂತಹ ರೈತರ ಮಕ್ಕಳೇ ಕೂಡಿ ಮಾಡಿರೋ ಈ ಸಿನಿಮಾ, ಪ್ರತಿಯೊಬ್ಬರಿಗೂ ಕನೆಕ್ಟ್ ಆಗಲಿದೆ. ದಲ್ಲಾಳಿಗಳಿಂದ ಸಣ್ಣ ಹಿಡುವಳಿದಾರ ರೈತರು ಎದುರಿಸುತ್ತಿರುವ ಸಮಸ್ಯೆಗಳು, ಎಪಿಎಂಸಿ ಮಾರ್ಕೆಟ್ಗಳಲ್ಲಿ ದರ ನಿಗದಿ, ಸೂಪರ್ ಮಾರ್ಕೆಟ್ಗಳಿಂದ ರೈತರಿಗಾಗ್ತಿರೋ ಅನ್ಯಾಯ ಸೇರಿದಂತೆ ಅವುಗಳಿಗೆ ಪರಿಹಾರ ಸಮೇತ ಬಂದಿದೆ ಈ ಚಿತ್ರ. ಶ್ರೀಕಾಂತ್ ಕಟಗಿ ಅವ್ರ ಚೊಚ್ಚಲ ನಿರ್ದೇಶನದ ಚಿತ್ರ ಅಂತ ಎಲ್ಲೂ ಅನಿಸಲ್ಲ. ಅಷ್ಟೊಂದು ಕ್ಯಾನ್ಡಿಡ್ ಆಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಅನ್ನ ತಿನ್ನುವ ಪ್ರತಿಯೊಬ್ಬ ವ್ಯಕ್ತಿ ಕೂಡ ನೋಡಲೇಬೇಕಾದ ಚಿತ್ರವಿದು. ಅಪ್ಪು, ರಕ್ಷಿತ್ ಶೆಟ್ಟಿ ಹಾಗೂ ಡಾಲಿ ಮೆಚ್ಚಿದ ಈ ಸಿನಿಮಾಗೆ ಸದ್ಯ ಎಲ್ಲೆಡೆಯಿಂದ ಬೊಂಬಾಟ್ ರೆಸ್ಪಾನ್ಸ್ ಸಿಗ್ತಿದ್ದು, ಮಿಸ್ ಮಾಡದೆ ಥಿಯೇಟರ್ನಲ್ಲೇ ಚಿತ್ರವನ್ನ ಕಣ್ತುಂಬಿಕೊಳ್ಳಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ