ಹುಬ್ಬಳ್ಳಿ : ಭ್ರಷ್ಟಾಚಾರ ಹೆಚ್ಚಾಗಿದೆ ಅಂತ ಕಾಂಗ್ರೆಸ್ ಪಾರ್ಟಿಯವರೇ ಹೇಳ್ತಿದ್ದಾರೆ. ಕಾಂಗ್ರೆಸ್‌ಗೆ ನೇತೃತ್ವ ಮತ್ತು ನಿಯತ್ತಿಲ್ಲ. ಬಿಜೆಪಿ ಬಂಡೆಗಲ್ಲಂತೆ ಗಟ್ಟಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೆ. ಮೋದಿಯವರ ನಾಯಕತ್ವ, ಬಿಜೆಪಿ ಪ್ರಸ್ತುತತೆ ಎಲ್ಲರಿಗೂ ಗೊತ್ತಿದೆ. ಹೀಗಾಗಿ, ಯಾರೂ ಬಿಜೆಪಿ ಬಿಟ್ಟು ಹೋಗಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಪವರ್ ಕಟ್ ಶುರುವಾಗಿದೆ. ಮಳೆಯಿಲ್ಲ, ಗಾಳಿಯಿಲ್ಲ ಅಂತಾರೆ. ಇವರ ಗಾಳಿಯೇ ಉಲ್ಟಾ ಆಗಿದೆ. ಕ್ಷುಲ್ಲಕ ರಾಜಕಾರಣ ಮಾಡಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಮಿಸ್ ಮ್ಯಾನೇಜ್ಮೆಂಟ್ ಇದೆ, ಹಣಕಾಸಿನ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ. ಕಾವೇರಿ ವಿಷಯ ಡೈವರ್ಟ್ ಮಾಡಲು ಪಕ್ಷಾಂತರ ವಿಚಾರ ಮುಂದೆ ತಂದಿದ್ದಾರೆ ಎಂದು ಕುಟುಕಿದರು.
ಅವರೇನು ಬಿಜೆಪಿ ಪಕ್ಷದಲ್ಲಿದ್ದಾರಾ?
ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿದೆ ಅಂತ ರಾಮಲಿಂಗಾರೆಡ್ಡಿಗೆ ಹೇಗೆ ಗೊತ್ತು?ಅವರೇನು ಬಿಜೆಪಿ ಪಕ್ಷದಲ್ಲಿದ್ದಾರಾ? ಸದ್ಯದಲ್ಲಿಯೇ ವಿಪಕ್ಷ ನಾಯಕನ ನೇಮಕ ಆಗುತ್ತೆ. ಚಲುವರಾಯಸ್ವಾಮಿ ಸೇರಿ ಮತ್ತೊಬ್ಬರು ಹೇಳಿಕೆಗೆ ನಾನು ಉತ್ತರ ಕೊಡುವ ಅಗತ್ಯವಿಲ್ಲ. ಚಲುವರಾಯಸ್ಬಾಮಿ ಮೇಲೆ ಗಂಭೀರ ಆರೋಪ ಬಂದಿವೆ, ಅವರು ರಾಜಿನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರದ ಮೇಲೆ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಿವೆ. ಪ್ರಾಥಮಿಕವಾಗಿ ಕಾಣುವಂತೆ ಸತ್ಯ ಎನ್ನುಬಹುದಾದ ಆರೋಪಗಳು ಕೇಳಿ ಬಂದಿವೆ. ದೂರು ಕೊಟ್ಟ ಗುತ್ತಿಗೆದಾರರನ್ನು ಮೊದಲು ಪೊಲೀಸ್ ಠಾಣೆಗೆ ಕರೆಸುತ್ತಿದ್ದಾರೆ. ಗುತ್ತಿಗೆದಾರರನ್ನು ಹೆದರಿಸಿ, ಬೆದರಿಸಿ ಉಲ್ಟಾ ಹೊಡೆಯುವ ಹಾಗೆ ಮಾಡಿದ್ದಾರೆ ಎಂದು ದೂರಿದರು.
ಕಾಂಗ್ರೆಸ್‌ಗೆ ಭಯ ಶುರುವಾಗಿದೆ
ಕಾವೇರಿ ವಿಷಯದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕಾವೇರಿ ವಿಚಾರದಲ್ಲಿ ಗಟ್ಟಿ ನಿಲುವು ತೆಗೆದುಕೊಂಡು ಹೇಳುವ ಪ್ರಯತ್ನ ಮಾಡುತ್ತಿಲ್ಲ. ದೇಶದಲ್ಲಿ ಅಲಯನ್ಸ್ ಉಳಿಸಿಕೊಳ್ಳಲು ಕಾಂಗ್ರೆಸ್ ಹೊರಟಿದೆ. ಬರುವ ಸೀಟುಗಳು ಕಡಿಮೆ ಆಗುತ್ತೆ ಅನ್ನೋ ಭಯ ಕಾಂಗ್ರೆಸ್‌ಗಿದೆ. ಅನೇಕ ಪಕ್ಷಗಳ ಜೊತೆ ಮಾಡಿಕೊಂಡಿರುವ ಅಲಯನ್ಸ್ ಉಳಿಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ ಎಂದು ಚಾಟಿ ಬೀಸಿದರು.