ಬೆಂಗಳೂರು : ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಜ್ಜುಗೊಳ್ಳುತ್ತಿದ್ದು, ಕರ್ನಾಟಕದಲ್ಲಿ ಮುಸ್ಲಿಂ ಮತಗಳನ್ನು ಸೆಳೆಯಲು ತಂತ್ರ ರೂಪಿಸಲಾಗುತ್ತಿದೆ. ಈ ಹಿನ್ನೆಲೆ ಇಂದು ಅಲ್ಪಸಂಖ್ಯಾತ ನಾಯಕರ ಮುಖಂಡರ ಜೊತೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಭೆ ನಡೆಸಿದರು.
ಮುಸ್ಲಿಂ ಮುಖಂಡರ ಸಭೆ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದ್ದು, ಲೋಕಸಭಾ ಚುನಾವಣೆಗೆ ಮುಖಂಡರು ಹೆಚ್ಚಿನ ಟಿಕೆಟ್ ಕೇಳಿದ್ದಾರೆ. ಅಲ್ಪಸಂಖ್ಯಾತರು ಹೆಚ್ಚಾಗಿರುವ ಕಡೆ ಅವರೇ ಸ್ಪರ್ಧಿಸಲು ಸಾಧ್ಯವಿಲ್ಲ. ಜನಸಂಖ್ಯೆಯ ಆಧಾರದ ಮೇಲೆ ಟಿಕೆಟ್ ಹಂಚಿಕೆ ಮಾಡಬೇಕಿದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಡಿಕೆಶಿ ಬರುವ ಮುನ್ನವೇ ಹೊರಟ ನಾಯಕರು
ಕೆಪಿಸಿಸಿ ಕಚೇರಿಯಲ್ಲಿ ಅಲ್ಪಸಂಖ್ಯಾತರ ಸಭೆ ಮುಗಿಸಿ ಕೆಲ ಮುಸ್ಲಿಂ ನಾಯಕರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬರುವ ಮುಂಚೆಯೇ ತೆರಳಿದರು. ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ಸಚಿವ ರಹೀಮ್ ಖಾನ್, ಶಾಸಕ ತನ್ವೀರ್ ಸೇಠ್ ಸೇರಿದಂತೆ ಕೆಲ ಮುಖಂಡರು ಕಚೇರಿಯ ಹೊರಗೆ ಡಿಕೆಶಿಗಾಗಿ ಕಾದು ನಿಂತಿದ್ದರು. ಕೆಪಿಸಿಸಿ ಕಚೇರಿಗೆ ತಡವಾಗಿ ಆಗಮಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಸಭೆಯ ನಿರ್ಣಯವೇನು ಎಂದು ಮಾಹಿತಿ ಪಡೆದರು.