ಬೆಂಗಳೂರು : ಬಜೆಟ್ ನಲ್ಲಿ ದಲಿತರಿಗೆ ಏನು ಕೊಟ್ರಿ? ಇದನ್ನು ಕೇಳಲು ದಲಿತ ಶಾಸಕರು, ಮಂತ್ರಿಗಳೇ ನಿಮಗೆ ನರ ಇಲ್ವಾ? ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ವಿಧಾನಸೌಧದ ಬಳಿ ಮಾತನಾಡಿದ ಅವರು, ನಮ್ಮ ಪಕ್ಷದ ಶಾಸಕರನ್ನು ಸದನದಿಂದ ಹೊರಹಾಕಿದ್ದಾರೆ. ನಮ್ಮನ್ನೆಲ್ಲಾ ಹೊರಗಾಕಿ ಬಜೆಟ್ ಒಪ್ಪಿಗೆ ಪಡೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದಲಿತರು, ಹಿಂದುಳಿದವರ ಪರ ಅಂತ ಈ ಸರ್ಕಾರ ಹೇಳಿಕೊಳ್ಳುತ್ತೆ. ಆದರೆ, ಬಜೆಟ್ನಲ್ಲಿ ದಲಿತರು, ಒಬಿಸಿಯವರಿಗೆ ಏನು ನೀಡಿದೆ ? ನಮ್ಮ ಸರ್ಕಾರ ದಲಿತರು, ಒಬಿಸಿಗೆ ಹೆಚ್ಚು ಅನುದಾನ ನೀಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಜನವಿರೋಧಿ, ಅತ್ಯಂತ ಭ್ರಷ್ಟ ಸರ್ಕಾರ ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ : ಬೊಮ್ಮಾಯಿಯವ್ರನ್ನ ನಾನು ಅಭಿನಂದಿಸ್ತೀನಿ : ಕುಮಾರಸ್ವಾಮಿ
ಕಣ್ಣಿಗೆ ಎಣ್ಣೆ ಬಿಟ್ಟುಕೊಂಡಿದ್ದೀರಾ?
ಎಸ್ಸಿ, ಎಸ್ಟಿ, ಟಿಎಸ್ಪಿ ಹಣವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿದ್ದಾರೆ. 13 ಸಾವಿರ ಕೋಟಿ ಹಣವನ್ನು ಉಚಿತ ಗ್ಯಾರಂಟಿಗಳಿಗೆ ಕೊಟ್ಟಿದ್ದಾರೆ. ನಿಜವಾದ ದಲಿತ ವಿರೋಧಿ ಸರ್ಕಾರ ಇದ್ರೆ, ಅದು ಕಾಂಗ್ರೆಸ್ ಸರ್ಕಾರ. ದಲಿತ ಶಾಸಕರಿಗೆ, ಮಂತ್ರಿಗಳಿಗೆ ಹೇಳ್ತೀನಿ.. ದಲಿತರಿಗೆ ಏನ್ ಕೊಟ್ರಿ? ಕಣ್ಣಿಗೆ ಎಣ್ಣೆ ಬಿಟ್ಟುಕೊಂಡಿದ್ದೀರಾ? ಹಣವನ್ನು ಯಾಕೆ ಡೈವರ್ಟ್ ಮಾಡ್ತೀರಿ ಅಂತ ಕೇಳಬೇಕಿತ್ತು. ಅದನ್ನು ಕೇಳಲು ನಿಮಗೆ ನರ ಇಲ್ವಾ? ಎಂದು ಘರ್ಜಿಸಿದರು.
ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ವಿದ್ಯುತ್ ದರ ಏರಿಕೆಯಾಗಿದೆ. ಮುಂದೆ ಹಾಲಿನ ದರವೂ ಏರುತ್ತೆ. ಈ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದೆ ಎಂದು ಬೊಮ್ಮಾಯಿ ಗುಡುಗಿದರು.