ಹಾವೇರಿ : ಮಳೆ ಇಲ್ಲದೇ ಸಂಕಷ್ಟದಲ್ಲಿದ್ದ ರೈತರಿಗೆ ವರುಣನ ಕೃಪೆಯಾಗಿದೆ. ಬತ್ತಿ ಹೋಗಿದ್ದ ವರದಾ ನದಿಯಲ್ಲಿ ಜೀವ ಜಲ ಹರಿದು ಬಂದಿದೆ.
ಹಾವೇರಿ ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆ ಕೊರತೆ ಇದೆ. ಆದರೆ, ಮಲೆನಾಡು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾದ ಕಾರಣ ವರದಾ ನದಿಗೆ ನೀರು ಹರಿದು ಬಂದಿದೆ. ಇಷ್ಟು ದಿನ ಕುಡಿಯೋದಕ್ಕೂ ನೀರಿಲ್ಲದೇ, ವ್ಯವಸಾಯಕ್ಕೆ ಮಳೆ ಇಲ್ಲದೇ ಕಂಗಾಲಾಗಿದ್ದ ರೈತರು ಫುಲ್ ಖುಷಿಯಾಗಿದ್ದಾರೆ.
ವರದಾ ನದಿಗೆ ನೀರು ಬರುತ್ತಿರುವುದನ್ನು ಹಬ್ಬದಂತೆ ಸಂಭ್ರಮಿಸಿದ ರೈತರು ಪೂಜೆ ಮಾಡಿ ವರದೆಯನ್ನು ಬರಮಾಡಿಕೊಂಡರು. ಬರದ ಬವಣೆಗೆ ಸಿಲುಕುತ್ತಿದ್ದ ರೈತರ ಪಾಲಿಗೆ ಜೀವ ಜಲ ಹರಿದು ಬಂದಿದೆ. ವರದೆ ಮೈದುಂಬಿ ಹರಿಯುತ್ತಿರುವ ಕಾರಣ ರೈತರೀಗ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ : ಮಲೆನಾಡಲ್ಲಿ ಮಳೆಗಾಗಿ ಗಡಿ ಮಾರಿಗೆ ವಿಶೇಷ ಪೂಜೆ
ಹನಿ ನೀರು ಕೂಡ ಇರಲಿಲ್ಲ
ಮಳೆ ಆಗದ ಪರಿಣಾಮ ಹಾವೇರಿ ಜಿಲ್ಲೆಯ ಜೀವ ನದಿಗಳಲ್ಲಿ ಒಂದಾದ ವರದಾ ನದಿ ಸಂಪೂರ್ಣವಾಗಿ ಬತ್ತಿ ಹೊಗಿತ್ತು. ಮೂರು ತಿಂಗಳಿನಿಂದ ಕುಡಿಯಲು ಒಂದು ಹನಿ ನೀರು ಕೂಡ ನದಿಯಲ್ಲಿ ಇರಲಿಲ್ಲ. 193ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಪರದಾಡಬೇಕಿತ್ತು. ಆದರೆ, ಕಳೆದೊಂದು ವಾರದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗುತ್ತಿರುವ ನಿರಂತರ ಮಳೆಯಿಂದ ವರದಾ ನದಿ ತುಂಬಿ ಹರಿಯುತ್ತಿದೆ.
ಮಳೆಗಾಗಿ ಕತ್ತೆ ಮದುವೆ
ವರುಣನ ಆಗಮನಕ್ಕಾಗಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ರೈತರು ಕತ್ತೆಗಳ ಮದುವೆ ಮಾಡಿದ್ದಾರೆ. ಮಳೆಯಿಲ್ಲದೆ ಕಂಗಾಲಾಗಿರುವ ರೈತರು, ಗ್ರಾಮಸ್ಥರು ಮಳೆಗಾಗಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕತ್ತೆಗಳ ಮದುವೆ ಮಾಡಿದ್ದಾರೆ. ಪೂಜೆ ಪುನಸ್ಕಾರಗಳ ಮೂಲಕ ದೇವರ ಮೊರೆ ಹೋಗಿದ್ದಾರೆ. ಮದುವೆ ಕಾರ್ಯದ ಬಳಿಕ ಗ್ರಾಮಸ್ಥರು ಕತ್ತೆಗಳನ್ನು ಮೆರವಣಿಗೆ ಮಾಡಿದ್ದಾರೆ.