ಉಡುಪಿ : ಜೈನ ಮುನಿಗಳ ಹತ್ಯೆ ವಿಚಾರ ತಿಳಿದು ನನಗೆ ಅತೀವ ದುಃಖವಾಗಿದೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬೇಸರಿಸಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಬೆಳಗಾವಿಯ ಚಿಕ್ಕೋಡಿಯ ಜೈನ ಮುನಿ ಹೀರೆಕುಡಿಯ ಆಚಾರ್ಯ ಶ್ರೀ 108 ಕಾಮ ಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣವನ್ನು ಖಂಡಿಸಿದರು.
ಇದು ಜನತೆಯಲ್ಲಿ ಗಾಬರಿ ಹುಟ್ಟಿಸುವ ಘಟನೆ. ಓರ್ವ ಸಾಧುವನ್ನು ಸ್ವತಂತ್ರ ಭಾರತದಲ್ಲಿ ಈ ರೀತಿ ಹತ್ಯೆ ಮಾಡಿರುವುದು ದುರಂತ. ಹಾಗಾದರೆ ಸಾಮಾನ್ಯ ಜನರ ಪಾಡೇನು? ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ : ನಾವು ಜೈನ ಮಂದಿರಕ್ಕೆ ರಕ್ಷಣೆ ಕೊಡುತ್ತೇವೆ : ಡಾ.ಜಿ ಪರಮೇಶ್ವರ
ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು
ಇಂತಹ ಕೃತ್ಯ ಎಂದೂ, ಎಲ್ಲೂ ಕೂಡ ನಡೆಯಬಾರದು. ಈ ಘಟನೆಯನ್ನು ತೀಕ್ಷ್ಣ ಮಾತುಗಳಿಂದ ಖಂಡಿಸುತ್ತೇವೆ. ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಂಡು ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಮುಂದೆ ಇಂತಹ ಘಟನೆ ಆಗದಂತೆ ತಕ್ಕ ಕ್ರಮ ಕೈಗೊಳ್ಳಬೇಕು ಎಂದು ಶ್ರೀಗಳು ಆಗ್ರಹಿಸಿದರು.
ಜು.6ರಂದು ಇದ್ದಕ್ಕಿಂದಂತೆ ಕಾಣೆ
ನಂದಿ ಪರ್ವತ ಆಶ್ರಮದ ಶ್ರೀ ಕಾಮಕುಮಾರ ಮುನಿ ಮಹಾರಾಜರು ಜುಲೈ 6ರಂದು ಇದ್ದಕ್ಕಿದ್ದಂತೆ ಮಠದಿಂದ ಕಾಣೆಯಾಗಿದ್ದರು. ಶ್ರೀಗಳು ಮಳೆಗಾಗಿ ಎಲ್ಲೋ ತಪಸ್ಸಿಗೆ ಕುಳಿತಿರಬಹುದು ಎಂದು ಹಿರೇಕೋಡಿ ಗ್ರಾಮಸ್ಥರು ತಿಳಿದಿದ್ದರು. ಬಳಿಕ, ಹುಡುಕಾಟ ನಡೆಸಿದ್ದರು. ಆದರೆ, ಮಾಹಿತಿ ಸಿಗದಿದ್ದಾಗ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.