ಬೆಂಗಳೂರ : ಕೇಂದ್ರ ಸರ್ಕಾರದವರು ಅಕ್ಕಿ ಕೊಡಲು ಆಗುವುದಿಲ್ಲ ಎಂದು ಹೇಳಿದ್ದಾರೆ ಅವರಿಗೆ ನಾವೇನು ಪುಕ್ಸಟ್ಟೆ ಅಕ್ಕಿಯನ್ನು ಕೇಳುತ್ತಿಲ್ಲ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಅಕ್ಕಿ ನೀಡದೇ ಕೇಂದ್ರ ಸರ್ಕಾರ ಬಡವರಿಗೆ ದ್ರೋಹ ಮಾಡುತ್ತಿದೆ. ಅಕ್ಕಿಯನ್ನು ಹರಾಜಿನಲ್ಲಿ ಖಾಸಗಿಯವರಿಗೆ ಮಾರಾಟ ಮಾಡಿ ನಮ್ಮ ಕಾರ್ಯಕ್ರಮಕ್ಕೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ದ ಕೆಂಡಾಮಂಡಲರಾದರು.
ಈಗ ನಾವು ಅಕ್ಕಿ ಸಿಗುವವರೆಗೂ ಐದು ಕೆಜಿ ಅಕ್ಕಿ ಜೊತೆಗೆ ಐದು ಕೆಜಿ ಅಕ್ಕಿಗೆ ಹಣ ಕೊಡಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು. ನಾವು ಮಾತಿನಂತೆ ನಡೆದುಕೊಳ್ಳಲೇಬೇಕೆಂದು ಈ ನಿರ್ಧಾರ ಮಾಡಿದ್ದೇವೆ ಎಂದ ಅವರು ಈಗಾಗಲೇ ನಾವು ಭರವಸೆ ಕೊಟ್ಟುಬಿಟ್ಟಿದ್ದೇವೆ ಅಲ್ಲದೆ ಐದು ಕೆಜಿ ಅಕ್ಕಿಯನ್ನೂ ಸಹ ನೀಡುತ್ತಿದ್ದೇವೆ. ನಾವು ಎಲ್ಲಾ ರೀತಿಯ ಪ್ರಯತ್ನ ಮಾಡಿದೆವು ಆದರೆ ಎಲ್ಲೂ ನಮಗೆ ಅಕ್ಕಿ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ : ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಇಳಿಸಿ ಮೂಲೆಗುಂಪು ಮಾಡಿದ್ದಾರೆ : ದಿನೇಶ್ ಗುಂಡೂರಾವ್
ಯಡಿಯೂರಪ್ಪ , ಬೊಮ್ಮಾಯಿ ಅವರೆಲ್ಲಾ ಕೇಂದ್ರದ ನಾಯಕರ ಜೊತೆ ಮಾತನಾಡಬೇಕು ಅಲ್ಲದೆ ನಾನೂ ಕೂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೆ, ಮುನಿಯಪ್ಪ ಅವರು ಕೇಂದ್ರ ಆಹಾರ ಸಚಿವರ ಭೇಟಿ ಮಾಡಿದ್ದರು ಎಂದ ಸಿದ್ದರಾಮಯ್ಯ ಇಷ್ಟೆಲ್ಲ ಪ್ರಯತ್ನ ಮಾಡಿದರೂ ಅಕ್ಕಿ ಕೊಡಲು ತಯಾರಿಲ್ಲ. ಅದಕ್ಕಾಗಿ ನೇರವಾಗಿ ಫಲಾನುಭವಿಯ ಖಾತೆಗೆ ಹಣ ತಲುಪಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದೇವೆ ಎಂದು ತಮ್ಮ ತೀರ್ಮಾನವನ್ನು ಸಮರ್ಥಿಸಿಕೊಂಡರು.
ಅಲ್ಲದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವರ್ಗಾವಣೆಯ ದಂಧೆಯ ಕುರಿತು ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯಿಸಿದ ಸಿಎಂ ಅದು ಅವರ ಸರ್ಕಾರದಲ್ಲಿ ನಡೆಯುತ್ತಿದ್ದುದನನ್ನು ನೆನೆಸಿಕೊಂಡು ಹೇಳಿದ್ದಾರೆ ಎಂದೆನಿಸುತ್ತದೆ ಎಂದು ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದರು.