Friday, November 22, 2024

ಬಿಜೆಪಿ ಮೂಗಿನ ಬದಲು ಹಣೆಗೆ ತುಪ್ಪ ಸವರಿದೆ : ಸಿದ್ದರಾಮಯ್ಯ

ಬೆಂಗಳೂರು : ಬಿಜೆಪಿ ಸರ್ಕಾರ ಮೀಸಲಾತಿ ವಿಚಾರದಲ್ಲಿ ಮೂಗಿಗೆ ತುಪ್ಪ ಸವರುವ ಬದಲು ಹಣೆಗೆ ತುಪ್ಪ ಸವರಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದ ನಿಯೋಗವು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪಂಚಮಸಾಲಿ ಸಮುದಾಯವನ್ನು ರಾಜ್ಯ  2ಎ ಪಟ್ಟಿಗೆ ಹಾಗೂ  ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಸೇರಿಸುವಂತೆ ಮನವಿ ಮಾಡಿತು.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ  ಮೀಸಲಾತಿ ವಿಚಾರದಲ್ಲಿ ತರಾತುರಿಯಲ್ಲಿ ನಿರ್ಧಾರ ಕೈಗೊಂಡು ಗೊಂದಲ ಸೃಷ್ಟಿಸಿದೆ. ಮೀಸಲಾತಿ ವಿಚಾರವಾಗಿ ಆತುರದ ನಿರ್ಧಾರ ಸಲ್ಲದು. ಸಂವಿಧಾನಾತ್ಮಕ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ತೀರ್ಮಾನ ಮಾಡಬೇಕು. ಹಾಗಾಗಿ ಸಭೆ ಕರೆದು ಕೂಲಂಕುಷವಾಗಿ ಚರ್ಚಿಸುತ್ತೇನೆ ಎಂದರು.

ಕಾನೂನು, ಸಂವಿಧಾನ ತಜ್ಞ ಸಭೆ

ಬಜೆಟ್ ಅಧಿವೇಶನದ ನಂತರ ಕಾನೂನು ಹಾಗೂ ಸಂವಿಧಾನ ತಜ್ಞರೊಂದಿಗೆ  ಸಭೆ  ಕರೆದು ಸಂವಿಧಾನಾತ್ಮಕ ತೀರ್ಮಾನ ಕೈಗೊಳ್ಳಲಾಗುವುದು. ಬಳಿಕ, ಪಂಚಮಸಾಲಿ ಸಮುದಾಯವನ್ನು  ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ಶಿಫಾರಸ್ಸು ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನುಡಿದಂತೆ ನಡೆದ ಮುಖ್ಯಮಂತ್ರಿಗಳು

ಶ್ರೀಗಳು ಮಾತನಾಡಿ, ನೀವು ನುಡಿದಂತೆ ನಡೆದ ಮುಖ್ಯಮಂತ್ರಿಗಳು. ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಪಂಚಮಸಾಲಿ  ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿದಲ್ಲಿ ಮುಖ್ಯ ವಾಹಿನಿಗೆ ಬರಲು ಅನುಕೂಲ ವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಸಮುದಾಯದ 15 ಮಂದಿ ಶಾಸಕರು ಹಾಗೂ ಪಂಚಮಸಾಲಿ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES