ಬೆಂಗಳೂರು : 500 ರೂ. ಹಾಗೂ 1,000 ರೂ. ಮುಖಬೆಲೆಯ ನೋಟುಗಳ ಬಗೆಗಿನ ಊಹಾಪೋದ ಬಗ್ಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರತಿಕ್ರಿಯೆ ನೀಡಿದ್ದಾರೆ.
ಆರ್ಥಿಕ ನೀತಿಯನ್ನು ಬಿಡುಗಡೆಗೊಳಿಸಿ ಮಾತನಾಡಿರುವ ಅವರು, 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವ ಯಾವುದೇ ಚಿಂತನೆ ಇಲ್ಲ. ಊಹಾಪೋಹ ಉಂಟು ಮಾಡಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಆರ್‌ಬಿಐ 500 ರೂ. ನೋಟುಗಳನ್ನು ಹಿಂತೆಗೆದುಕೊಳ್ಳುವ ಅಥವಾ 1,000 ರೂ. ಮುಖಬೆಲೆಯ ನೋಟುಗಳನ್ನು ಮರು ಪರಿಚಯಿಸುವ ಬಗ್ಗೆ ಯೋಚಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆ ಮೂಲಕ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆದ ನಂತರ 500 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ರದ್ದುಗೊಳಿಸಲಾಗುತ್ತದೆ ಎಂದು ಹಬ್ಬಿದ ಸುದ್ದಿಗೆ ತಿಲಾಂಜಲಿ ಇಟ್ಟಿದ್ದಾರೆ.
ಇದನ್ನೂ ಓದಿ : 2000 ರೂ. ನೋಟಿಗಾಗಿ ಕಿರಿಕ್ : ರೈತನ ಮೇಲೆ ಹಲ್ಲೆಗೆ ಮುಂದಾದ ಕ್ಯಾಶಿಯರ್
ಶೇ.50 ರಷ್ಟು ನೋಟುಗಳು ವಾಪಸ್
ಒಟ್ಟು 3.62 ಲಕ್ಷ ಕೋಟಿ 2,000 ರೂ. ನೋಟುಗಳು ಚಲಾವಣೆಯಲ್ಲಿವೆ. 2,000 ರೂ. ನೋಟುಗಳುನ್ನು ಚಲಾವಣೆಯಿಂದ ಹಿಂಪಡೆದ ಬಳಿಕ ಸುಮಾರು 1.8 ಲಕ್ಷ ಕೋಟಿ 2,000 ರೂ. ನೋಟುಗಳು ವಾಪಸ್ ಬಂದಿವೆ. ಇದು ಚಲಾವಣೆಯಲ್ಲಿದ್ದ 2,000 ರೂಪಾಯಿ ನೋಟುಗಳ ಸುಮಾರು ಶೇ.50 ರಷ್ಟಿದೆ ಎಂದು ಶಕ್ತಿಕಾಂತ ದಾಸ್ ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 30 ರವರೆಗೆ ಅವಕಾಶ
ಮೇ19 ರಂದು ಆರ್ ಬಿಐ 2,000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಘೋಷಿಸಿತು. ಗ್ರಾಹಕರು (ಜನರು) ಸೆಪ್ಟೆಂಬರ್ 30 ರವರೆಗೆ 20,000 ರೂ.ವರೆಗೆ ಠೇವಣಿ ಮಾಡಬಹುದು ಅಥವಾ ವಿನಿಮಯ ಮಾಡಿಕೊಳ್ಳಬಹುದು ಎಂದು ಸೆಂಟ್ರಲ್ ಬ್ಯಾಂಕ್ ಹೇಳಿದೆ.