ಶಿವಮೊಗ್ಗ : ವರ್ಗಾವಣೆಗೆ 87 ಸಾವಿರ ಮಂದಿ ಶಿಕ್ಷಕರು ಅರ್ಜಿ ಹಾಕಿದ್ರು. ಎಲ್ಲಾ ಪ್ರಕ್ರಿಯೆ ಮುಗಿದು ನೋಟಿಫಿಕೇಶನ್ ಆಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಧಿಕಾರ ಬದಲಾವಣೆ ಆಗಿದೆ. ಯಾರಿಂದ ತಪ್ಪುಗಳು ಆಗಿವೆ ನಿಮಗೆ ಗೊತ್ತು. ನಾನು ಸಚಿವನಾಗಿ ಐದು ದಿನ ಆಗಿಲ್ಲ. ಆದ್ರೆ, ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಿಸಿದ್ದೇನೆ ಎಂದು ತಿಳಿಸಿದ್ದಾರೆ.
ಮಕ್ಕಳಿಗೆ ಶಿಕ್ಷಣ ಕೊಡುವ ಜವಾಬ್ದಾರಿ ಸಿಕ್ಕಿರುವುದು ಸಂತೋಷವಾಗಿದೆ. ಶಿವಮೊಗ್ಗಕ್ಕೆ ಕಾಲಿಡುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಕೊಟ್ಟಿರುವ ಸುದ್ದಿ ಸಿಕ್ಕಿದೆ. ಈಗಾಗಲೇ ಐದು ಗ್ಯಾರಂಟಿ ಕೊಟ್ಟಿದ್ದೇವೆ. ಪ್ರಣಾಳಿಕೆಯಲ್ಲಿರುವ ಗ್ಯಾರಂಟಿ ಕೊಡಬೇಕು. ಆ ನಿಟ್ಟಿನಲ್ಲಿ ಆಡಳಿತ ಮಾಡಿಕೊಂಡು ಹೋಗುವ ಜವಾಬ್ದಾರಿ ಇದೆ. ಅದನ್ನು ಪ್ರಾಮಾಣಿಕವಾಗಿ ಮಾಡ್ತೀವಿ, ವಿಶ್ವಾಸ ಇಡಿ. ಹಂತಹಂತವಾಗಿ ಎಲ್ಲವೂ ಆಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ : ಬಜೆಪಿ ಕಾಲೆಳೆದ ಕಾಂಗ್ರೆಸ್
ನೇಮಕಾತಿ ಕಾನೂನು ಬದ್ಧವಾಗಿರಬೇಕು
ವಿರೋಧ ಪಕ್ಷದವರು ಅವರ ಕೆಲಸ ಮಾಡಲಿ. ಗ್ಯಾರಂಟಿ ಆದ ಮೇಲೆ ಅವರು ಬೇರೆ ರೂಟ್ ಹಿಡಿದಿದ್ದಾರೆ. ಸಾಗರ ಕ್ಷೇತ್ರದಲ್ಲಿ ಶಿಕ್ಷಕರಿಲ್ಲದೆ ಶಾಲೆ ತೆರೆಯದ ವಿಚಾರದ ಬಗ್ಗೆ ಮಾತನಾಡಿ, ಆ ಶಾಲೆಗಳಲ್ಲಿ ಖಾಯಂ ಶಿಕ್ಷಕರಿಲ್ಲ, ಅತಿಥಿ ಶಿಕ್ಷಕರಿದ್ದಾರೆ. ಖಾಯಂ ಶಿಕ್ಷಕರು ಬೇಕೆಂಬ ಬೇಡಿಕೆಯಿದೆ. ಹಂತ ಹಂತವಾಗಿ ಎಲ್ಲವನ್ನೂ ಮಾಡ್ತೀವಿ. ನೇಮಕಾತಿ ಕಾನೂನು ಬದ್ಧವಾಗಿ ಮಾಡಬೇಕಾಗುತ್ತೆ ಎಂದು ಹೇಳಿದ್ದಾರೆ.
ನಾನು ಏನು ಹೇಳಿದ್ರೂ ತಪ್ಪಾಗುತ್ತೆ
ಹೈದರಬಾದ್ ಕರ್ನಾಟಕ ಮತ್ತಿತರ ವಿಭಾಗಗಳಿವೆ. ಅದನ್ನು ಗಮನಿಸಬೇಕು. ಕೆಲವೊಂದು ಪ್ರಕರಣ ನ್ಯಾಯಾಲಯದಲ್ಲಿವೆ. ಈಗ ನಾನು ಏನು ಹೇಳಿದ್ರೂ ತಪ್ಪಾಗುತ್ತೆ. ಅಧಿಕಾರಿಗಳ ಜೊತೆ ಮಾತಾಡ್ತೀನಿ. ಮಕ್ಕಳ ವಿದ್ಯಾಭಾಸಕ್ಕೆ ಯಾವುದೇ ತೊಂದ್ರೆ ಆಗದಂತೆ ನೋಡಿಕೊಳ್ತೇನೆ. ಪೋಷಕರಿಗೆ, ಮಕ್ಕಳಿಗೆ ವಿಶ್ವಾಸ ಕೊಡ್ತೇನೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.