ಬೆಂಗಳೂರು : ಚಿತ್ರದುರ್ಗದ ಮುರುಘಾಮಠಕ್ಕೆ ಸರ್ಕಾರದ ಆಡಳಿತಾಧಿಕಾರಿ ನೇಮಕವನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಆಡಳಿತಾಧಿಕಾರಿ ನೇಮಕ ಕುರಿತು ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.
ಮುರುಘಾ ಮಠದ ಆಡಳಿತಾಧಿಕಾರಿ ನೇಮಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ. ವೀರಶೈವ ಮುಖಂಡರು, ಸಮಾಜದ ಪ್ರಮುಖರು ಆಡಳಿತ ನಡೆಸಬಹುದು. ಇನ್ನು 4 ವಾರಗಳ ಕಾಲ ಮಾತ್ರ ಆಡಳಿತಾಧಿಕಾರಿ ಮುಂದುವರಿಯಬಹುದು. 4 ವಾರಗಳ ನಂತರ ಆಡಳಿತಾಧಿಕಾರಿಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಇದನ್ನೂ ಓದಿ : ಮುರುಘಾ ಮಠಕ್ಕೆ ಹೊಸ ಪೀಠಾಧಿಪತಿ ನೇಮಕ.!
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿಗಳು ಪೋಕ್ಸೋ ಕಾಯ್ದೆಯಡಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಹಿನ್ನೆಲೆ ಟ್ರಸ್ಟ್ ಮತ್ತು ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಆಡಳಿತಾಧಿಕಾರಿ ನೇಮಕ ಮಾಡುವಂತೆ ಭಕ್ತರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು.
ಆದ್ದರಿಂದ ರಾಜ್ಯ ಸರ್ಕಾರ ಡಿಸೆಂಬರ್ 13 ರಂದು ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್ ವಸ್ತ್ರದ್ ಅವರನ್ನ ಮುರುಘಾಮಠದ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಇದೀಗ, ಆಡಳಿತಾಧಿಕಾರಿ ನೇಮಕ ರದ್ದುಗೊಳಿಸಲಾಗಿದೆ.