ಬೆಂಗಳೂರು : ತ್ರಿಬಲ್ ಆರ್ ಸಿನಿಮಾ ರಿಲೀಸ್ ಆಗಿ 208 ದಿನಗಳಾದರೂ, ಜಪಾನ್ ಥಿಯೇಟರ್ಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣ್ತಿದೆ. ಆಸ್ಕರ್ ವಿಜೇತ ಆರ್ಆರ್ಆರ್ ಸಿನಿಮಾದ ಸೆಂಟರ್ ಆಫ್ ಅಟ್ರ್ಯಾಕ್ಷನ್ ರಾಮ್ ಚರಣ್ ಹಾಗೂ ತಾರಕ್. ಸದ್ಯ ಗ್ಲೋಬಲ್ ಸ್ಟಾರ್ಗಳಾಗಿ ವಿಶ್ವದಾದ್ಯಂತ ರಾರಾಜಿಸ್ತಿರೋ ಇವರುಗಳು, ಜಪಾನ್ನ ಫೇಮಸ್ ಲೈಫ್ಸ್ಟೈಲ್ ಮ್ಯಾಗಜಿನ್ನ ಕವರ್ ಪೇಜ್ ಮೇಲೆ ಮಿಂಚುತ್ತಿದ್ದಾರೆ.
2022ರ ಮಾರ್ಚ್ 25ರಂದು ತೆರೆಕಂಡ ತೆಲುಗಿನ ಮಾಸ್ಟರ್ಪೀಸ್ ಸಿನಿಮಾ ತ್ರಿಬಲ್ ಆರ್, ವಿಶ್ವದಾದ್ಯಂತ ತೆರೆಕಂಡು ವರ್ಷ ಕಳೆದರೂ ಅದರ ಹವಾ ಮಾತ್ರ ಇಂದಿಗೂ ಕಮ್ಮಿ ಆಗಿಲ್ಲ. ಕಾರಣ ಸಿನಿಮಾಂತ್ರಿಕ ರಾಜಮೌಳಿಯ ಮೇಕಿಂಗ್, ಕಥೆಯಲ್ಲಿದ್ದ ಗತ್ತು, ಪಾತ್ರಗಳಲ್ಲಿನ ಗಮ್ಮತ್ತು ನೋಡುಗರನ್ನು ಇನ್ನಿಲ್ಲದೆ ಕಾಡಿದೆ.
ನೋಡುಗರನ್ನು ಸ್ವತಂತ್ರಪೂರ್ವ ಭಾರತಕ್ಕೆ ಕರೆದೊಯ್ಯೋ ತ್ರಿಬಲ್ ಆರ್ ಸಿನಿಮಾ, ಅಲ್ಲಿ ದೇಶಪ್ರೇಮದ ಜೊತೆ ಸ್ವಾಭಿಮಾನ, ಸ್ನೇಹದ ಮಹತ್ವವನ್ನು ಸಾರಲಿದೆ. ರಾಮ್ ಚರಣ್ ತೇಜ್ ಹಾಗೂ ಜೂನಿಯರ್ ಎನ್ಟಿಆರ್ ಅಂತಹ ಬಿಗ್ ಸ್ಟಾರ್ಗಳ ಮಲ್ಟಿಸ್ಟಾರ್ ಸಿನಿಮಾ ಇದಾಗಿದ್ದು, ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ಕೂಡ ತಾರಾಗಣದಲ್ಲಿದ್ದಾರೆ.
ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ
ನ್ಯಾಷನಲ್, ಇಂಟರ್ನ್ಯಾಷನಲ್ ಲೆವೆಲ್ನಲ್ಲಿ ನೋಡುಗರ ಹುಬ್ಬೇರಿಸಿದ ತ್ರಿಬಲ್ ಆರ್ ಸಿನಿಮಾ, ಸಾಲು ಸಾಲು ಹಾಲಿವುಡ್ ಪ್ರಶಸ್ತಿಗಳಿಗೆ ಭಾಜನವಾಯ್ತು. ಅಲ್ಲದೆ, ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಕೂಡ ಮುಡಿಗೇರಿಸಿಕೊಳ್ತು. ಕೀರವಾಣಿ ಸಂಗೀತ ಸಂಯೋಜನೆಯ ನಾಟು ನಾಟು ಹಾಡಿಗಾಗಿ ಹಾಲಿವುಡ್ ಅಂಗಳದಲ್ಲಿ ಈ ಪ್ರಶಸ್ತಿ ದೊರಕಿದ್ದಲ್ಲದೆ, ಚರಣ್ ಹಾಗೂ ತಾರಕ್ರ ಸ್ಟಾರ್ಡಮ್ ರಾತ್ರೋರಾತ್ರಿ ಹೆಚ್ಚಾಯ್ತು.
ಌನನ್ನ ಮುಖಪುಟದಲ್ಲಿ ಎನ್ ಟಿಆರ್, ಚೆರ್ರಿ
ಗ್ಲೋಬಲ್ ಸ್ಟಾರ್ಗಳಾಗಿ ಮಿಂಚ್ತಿರೋ ರಾಮ್ ಚರಣ್ ಹಾಗೂ ಜೂನಿಯರ್ ಎನ್ಟಿಆರ್, ಸದ್ಯ ಜಪಾನ್ನ ಪ್ರತಿಷ್ಠಿತ ಲೈಫ್ಸ್ಟೈಲ್ ಮ್ಯಾಗಜಿನ್ ಌನನ್ನ ಮುಖಪುಟದಲ್ಲಿ ರಾರಾಜಿಸ್ತಿದ್ದಾರೆ. ಇದರಿಂದ ಮಗದೊಮ್ಮೆ ಗ್ಲೋಬಲ್ವೈಸ್ ಸಂಚಲನ ಮೂಡಿಸಿದ್ದಾರೆ. ಅದಕ್ಕೆ ಕಾರಣ ಯಶಸ್ವಿ 208 ದಿನಗಳಾದ್ರೂ ಹೌಸ್ಫುಲ್ ಪ್ರದರ್ಶನ ಕಾಣ್ತಿರೋ ತ್ರಿಬಲ್ ಆರ್ ಸಿನಿಮಾ.
ಬಾಕ್ಸ್ ಆಫೀಸ್ ನಲ್ಲಿ ಕೋಟ್ಯಂತರ ರೂ.
2022ರ ಅಕ್ಟೋಬರ್21ರಂದು ಜಪಾನ್ನಲ್ಲಿ ತೆರೆಕಂಡ ತ್ರಿಬಲ್ ಆರ್ ಸಿನಿಮಾ, ಇದೇ ಮೊದಲ ಬಾರಿ ಇಂಡಿಯನ್ ಸಿನಿಮಾವೊಂದು ಅತಿಹೆಚ್ಚು ತೆರೆಗಳಲ್ಲಿ ರಂಜಿಸೋಕೆ ಮುಂದಾಯ್ತು. ಜಪಾನ್ನ ಸುಮಾರು 44 ನಗರಗಳಲ್ಲಿ 209 ಸ್ಕ್ರೀನ್ಸ್ ಹಾಗೂ 31 ಐಮ್ಯಾಕ್ಸ್ ಸ್ಕ್ರೀನ್ಸ್ನಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಬಾಕ್ಸ್ ಆಫೀಸ್ನಲ್ಲೂ ಕೋಟ್ಯಂತರ ರೂಪಾಯಿ ಕಲೆಹಾಕಿರೋ ಈ ಸಿನಿಮಾ, ಅಲ್ಲಿನ ಪ್ರೇಕ್ಷಕರನ್ನ ಇನ್ನಿಲ್ಲದೆ ಕಾಡಿದೆ.
ಹತ್ತಾರು ಅಂತಾರಾಷ್ಟ್ರೀಯ ಪತ್ರಿಕೆಗಳು ಹಾಗೂ ಮ್ಯಾಗಜಿನ್ಗಳಲ್ಲಿ ಸದ್ದು ಮಾಡಿರೋ ತ್ರಿಬಲ್ ಆರ್ ಸಿನಿಮಾ ಹಾಗೂ ಅದ್ರ ಸ್ಟಾರ್ಸ್, ಇದೀಗ ಜಪಾನ್ ಮ್ಯಾಗಜಿನ್ನಲ್ಲೂ ಮ್ಯಾಜಿಕ್ ಮಾಡಿರೋದು ಇಂಟರೆಸ್ಟಿಂಗ್. ಸದ್ಯ ಜೂನಿಯರ್ ಎನ್ಟಿಆರ್ ಹಾಗೂ ಚರಣ್ ನಡುವಿನ ಸ್ನೇಹ ಅಷ್ಟಕ್ಕಷ್ಟೇ. ಆದರೆ, ಅವರ ಸಿನಿಮಾದಲ್ಲಿನ ಗೆಳೆತನ ಮಾತ್ರ ಶಾಶ್ವತ. ಚಿತ್ರದಲ್ಲಿನ ಬಾಂಧವ್ಯದಂತೆ ಮತ್ತೆ ಅವರ ನಡುವೆ ಅಸಮಾಧಾನಗಳು ತಿಳಿಯಾಗಲಿ. ಸ್ನೇಹ ಚಿಗುರೊಡೆಯಲಿ ಅನ್ನೋದು ಅಭಿಮಾನಿಗಳ ಬಯಕೆ.
- ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ