ಮೈಸೂರು : ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದು, ಕಾಂಗ್ರೆಸ್ ಹೈ ಕಮಾಂಡ್ ಸಿದ್ದರಾಮಯ್ಯ ಅವರಿಗೆ ಸಿಎಂ ಪಟ್ಟಕಟ್ಟಿದೆ.
ಇತ್ತ, ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ಸಂಭ್ರಮ ಮನೆ ಮಾಡಿದ್ದು, ನೂತನ ಸಿಎಂಗೆ ತವರಲ್ಲಿ ಜೋಡಿ ಟಗರಿನ ಗಿಫ್ಟ್ ರೆಡಿಯಾಗಿವೆ. ಸಿದ್ದರಾಮಯ್ಯ ಸಿಎಂ ಆದರೆ ಜೋಡಿ ಟಗರು ಗಿಫ್ಟ್ ಕೊಡ್ತೀವಿ ಅಂದುಕೊಂಡಿದ್ದೆವು ಅಂತಾ ವರುಣಾ ಕ್ಷೇತ್ರದ ಕಡವೆಕಟ್ಟೆಹುಂಡಿ ಗ್ರಾಮದ ಮಹದೇವು ಹಾಗೂ ಚಂದ್ರು ಟಗರುಗಳನ್ನು ರೆಡಿ ಇಟ್ಕೊಂಡಿದ್ದಾರೆ.
ಸಿದ್ದರಾಮಯ್ಯ ರಾಜ್ಯದ ಮಾಸ್ ಲೀಡರ್. ಎರಡನೇ ಬಾರಿಗೆ ರಾಜ್ಯದ 24ನೇ ಸಿಎಂ ಆಗಿ ಆಯ್ಕೆಯಾಗಿರೋ ಸಿದ್ದರಾಮಯ್ಯಗೆ ಮೇ 20ರಂದು ಪಟ್ಟಾಭಿಷೇಕ ನೆರವೇರಲಿದೆ. ರಾಜ್ಯದಲ್ಲಿ 135 ಸ್ಥಾನಗಳ ಮೂಲಕ ಕಾಂಗ್ರೆಸ್ ಸ್ಪಷ್ಟ ಬಹುಮತ ಬಂದ ನಂತ್ರ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ತಾರಾ? ಡಿಕೆಶಿ ಮುಖ್ಯಮಂತ್ರಿ ಆಗ್ತಾರಾ? ಅನ್ನೋ ಹಗ್ಗ ಜಗ್ಗಾಟದ ನಡುವೆ ಹೈ ಕಮಾಂಡ್ ಸಿದ್ದರಾಮಯ್ಯ ಅವರೇ ರಾಜ್ಯದ ಸಿಎಂ ಅಂತಾ ಘೋಷಣೆ ಮಾಡಿದೆ.
ಇದನ್ನೂ ಓದಿ : ‘ಲಿಂಗಾಯತರಿಗೆ ಯಾವ ಸ್ಥಾನ’ ಕೊಡ್ತಾರೆ ನೋಡೋಣ : ಬೊಮ್ಮಾಯಿ
ಮತ್ತೊಂದೆಡೆ, ಸಿದ್ದರಾಮಯ್ಯ ಹೆಸರು ಘೋಷಣೆಯಾಗ್ತಿದ್ದಂತೆ ಹುಟ್ಟೂರಿನಲ್ಲಿ ಅವರ 30 ಅಡಿ ಎತ್ತರದ ಬೃಹತ್ ಕಟೌಟ್ ಗೆ ಜನ ಹಾಲಿನ ಅಭಿಷೇಕ ಮಾಡಿದ ಗ್ರಾಮದ ಯುವಕರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಇನ್ನೂ ಅಣ್ಣ ಸಿಎಂ ಆದ ಖುಷಿ ಹಂಚಿಕೊಂಡ ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ ಆಣ್ಣ ಸಿಎಂ ಆಗಿರೋದು ತುಂಬಾ ಸಂತೋಷ ತಂದಿದೆ. ಅಣ್ಣ ಮೊದಲಿನಿಂದಲೂ ಹಿಡಿದ ಹಠ ಬಿಡುತ್ತಿರಲಿಲ್ಲ, ಹಠ ಹಿಡಿದ್ರೆ ನೆರವೇರೋ ತನಕನೂ ಬಿಡ್ತಾ ಇರಲಿಲ್ಲ, ಅಣ್ಣ ಸಿಎಂ ಆಗಿರೋದ್ರಿಂದ ರಾಜ್ಯದ ಜನರಿಗೆ ಒಳ್ಳೆಯದಾಗುತ್ತೆ ಎಂದಿದ್ದಾರೆ.
5 ವರ್ಷ ಪೂರ್ಣಗೊಳಿಸುತ್ತಾರಾ ಸಿದ್ದು?
ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜ ಅರಸು ನಂತರ 2ನೇ ಬಾರಿಗೆ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡ್ತಿರೋ ಖ್ಯಾತಿ ಸಿದ್ದರಾಮಯ್ಯ ಅವ್ರಿಗೆ ಇದೆ. 1972 ರಿಂದ 1977ರ ವರೆಗೆ ಡಿ.ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಬಳಿಕ 1978 ರಿಂದ 1980ರ ವರೆಗೆ ಮತ್ತೆ ಎರಡನೇ ಬಾರಿಗೆ ರಾಜ್ಯದ ಸಿಎಂ ಆಗಿದ್ದರು. ಸಿದ್ದರಾಮಯ್ಯ ಕೂಡ 2013 ರಿಂದ 2018ರ ವರೆಗೆ ಸಿಎಂ ಆಗಿ ಪೂರ್ಣ ಅವಧಿ ಅಧಿಕಾರ ನಡೆಸಿದ್ದರು. ಇದೀಗ ಸ್ಪಷ್ಟ ಬಹುಮತದೊಂದಿದೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನೇಮಕವಾಗಿದ್ದಾರೆ.
ಒಟ್ಟಿನಲ್ಲಿ ಸಿದ್ದರಾಮಯ್ಯ ಎರಡನೇ ಬಾರಿಗೆ ಸಿಎಂ ಆಗಿರೋದು ತವರಿನ ಜನರಿಗೆ ಖುಷಿ ತಂದಿದೆ. ವರುಣಾ ಕ್ಷೇತ್ರ ಸಿದ್ದರಾಮಯ್ಯ ಅವರ ಅದೃಷ್ಟದ ಕ್ಷೇತ್ರ ಅನ್ನೋದು ಮತ್ತೊಮ್ಮೆ ಸಾಬೀತಾದಂತಾಗಿದೆ.