ಬೆಂಗಳೂರು: ನಿನ್ನೇ ರಾಜ್ಯ ವಿಧಾನ ಸಭಾ ಚುನಾವಣಾ ಫಲಿತಾಂಶ ಬಂದಿದ್ದು,ಕಾಂಗ್ರೆಸ್ ಭಾರೀ ಬಹುಮತ ಪಡೆದಿದ್ದು, ಬಿಜೆಪಿ ಸೋಲುಂಡು ಬಿಜೆಪಿ ನಾಯಕರು ನಿರಾಸೆಯಾಗಿದ್ದಾರೆ.
ಹೌದು, ಜಯನಗರದ ಫಲಿತಾಂಶ ಚುನಾವಣಾ ಅಧಿಕಾರಿಗಳಿಗೆ ಭಾರೀ ತಲೆನೋವು ಆಗಿದ್ದು, ನಿನ್ನೇ ತಡರಾತ್ರಿಯವರೆಗೂ ಮತಏಣಿಕೆ ಪ್ರಕ್ರಿಯೆ ನಡೆದಿದೆ.
ಇನ್ನೂ ಅಳಿದು ತೂಗಿ ಲೆಕ್ಕ ಮಾಡಿದ್ದರು ನಾಲ್ಕು ಬಾರಿ ಮತ್ತೆ ಮತ್ತೆ ಎಣಿಸಿದರೂ 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗೆ ನಿಚ್ಚಳ ಗೆಲುವು ಎಂದು ಚುನಾವಣಾ ಆಯೋಗ ಸಾರಿದೆ. ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮೂರ್ತಿಗೆ (BJP CK Ramamurthy) 57,797 ಮತಗಳು ಮತ್ತು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿಗೆ 57,781 ಮತಗಳು ಎಂದು ಚುನಾವಣಾಧಿಕಾರಿಗಳಿಂದ ಜಯನಗರ ಕ್ಷೇತ್ರದ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಸೌಮ್ಯಾ ರೆಡ್ಡಿ (Sowmya Reddy) ನಡುರಾತ್ರಿ ಕಣ್ಣೀರು ಹಾಕಿದ್ದಾರೆ.
ಮೊದಲ ಸುತ್ತಿನಲ್ಲಿ 116 ಮತಗಳಿಂದ ಗೆದ್ದುಬೀಗಿದ್ದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಆ ನಂತರ ಮರು ಮರು ಎಣಿಕೆಯಾದಾಗ ಫಲಿತಾಂಶ ಕಾಂಗ್ರೆಸ್ನ ‘ಕೈ’ ಚೆಲ್ಲಿತ್ತು. ವಿಜಯ ಲಕ್ಷ್ಮಿ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಅವರ ಕೊರಳಿಗೆ ಜಯದ ಹಾರ ಹಾಕಿದ್ದಳು.
ಇನ್ನು, ಜಯನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು ಎಂದು ಅಂತಿಮವಾಗಿ ಅಧಿಕೃತ ಘೋಷಣೆಯಾಗುತ್ತಿದ್ದಂತೆ ಮೊದಲ ಬಾರಿ ಮತ ಎಣಿಕೆಯಲ್ಲಿ ಗೆಲುವಿನ ನಗೆ ಬೀರಿದ್ದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಮತ ಕೇಂದ್ರದ ಬಳಿ ಕಣ್ಣೀರು ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಇಂದು ಭಾನುವಾರವೇ ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಸೌಮ್ಯಾರೆಡ್ಡಿ ಘೋಷಿಸಿದರು.