ಬೆಂಗಳೂರು : ವಿರೋಧ ಪಕ್ಷದ ನಾಯಕರ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇವರಿಬ್ಬರನ್ನು ನಾವು ಜೈಲಿಗೆ ಹಾಕುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಗುಡುಗಿದ್ದಾರೆ.
ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಸ್ವಲ್ಪ ದಿನ ಕಾಯಿರಿ. ಕಬ್ಬಿಣ ಕಾದ ಬಳಿಕವೇ ಅದಕ್ಕೆ ಹೊಡೆಯಬೇಕು. ಯಾವಾಗ ಯಾವ ಕ್ರಮ ತೆಗೆದುಕೊಳ್ಳಬೇಕೋ ಆಗ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಷನ್ ನಲ್ಲಿ ಹಣ ಪಡೆದಿದ್ದಾರೆ ಎಂದು ನ್ಯಾಯಮೂರ್ತಿ ಕೆಂಪಣ್ಣ ನವರು ವರದಿ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಈಗ ಬೇಲ್ ನಲ್ಲಿ ಇದ್ದಾರೆ. ಅವರು ಯಾವಾಗ ಒಳಗೆ ಹೋಗ್ತಾರೆ ಗೊತ್ತಿಲ್ಲ. ಕಬ್ಬಿಣ ಕಾದ ಬಳಿಕ ಅದಕ್ಕೆ ರೂಪ ಕೊಡಲು ತಟ್ಟಬೇಕು. ಹಾಗೆಯೇ, ಡಿಕೆಶಿ ಮತ್ತು ಸಿದ್ದರಾಮಯ್ಯಗೆ ಸರಿಯಾದ ಸಮಯದಲ್ಲಿ ಜೈಲಿಗೆ ಕಳಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ರಿಸ್ಕ್ ತೆಗೆದುಕೊಳ್ಳೋದ್ರಲ್ಲಿ ‘ಬಿಜೆಪಿ ವರಿಷ್ಠರು ನಿಸ್ಸೀಮರು’ : ಬಿ.ವೈ ವಿಜಯೇಂದ್ರ
ನಾನು ಜಗ್ಗುವುದು ಇಲ್ಲ, ಬಗ್ಗುವುದು ಇಲ್ಲ
ನಿನ್ನೆ ನನಗೆ ಪ್ರಧಾನಿ ಮೋದಿ ಅವರು ದೂರವಾಣಿ ಕರೆ ಮಾಡಿ ಮಾತನಾಡಿದ್ದು, ಈ ಬಗ್ಗೆಯೂ ಕಾಂಗ್ರೆಸ್ ವ್ಯಂಗ್ಯ ಮಾಡಿದೆ. 40 ಪರ್ಸೆಂಟ್ ಮತ್ತು ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಮುಖಂಡ ಸುರ್ಜೇವಾಲಾ ಟೀಕೆ ಮಾಡಿದ್ದಾರೆ. ಕೋರ್ಟ್, ತನಿಖೆ ಬಗ್ಗೆ ಕಾಂಗ್ರೆಸ್ ಗೆ ನಂಬಿಕೆ ಇದೆಯೇ? ರಾಹುಲ್ ಗಾಂಧಿ ವಿರುದ್ಧ ಕೋರ್ಟ್ ತೀರ್ಪು ನೀಡಿದೆ. ನನಗೆ ಕೋರ್ಟ್ ಕ್ಲೀನ್ ಚಿಟ್ ನೀಡಿದೆ. ಇದ್ಯಾವುದಕ್ಕೂ ನಿಮಗೆ ನಂಬಿಕೆ ಇಲ್ಲ. ಕಾಂಗ್ರೆಸ್ ಟೀಕೆಗೆ ನಾನು ಜಗ್ಗುವುದು ಇಲ್ಲ, ಬಗ್ಗುವುದು ಇಲ್ಲ ಎಂದು ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಸೊಸೆಗೆ ಸ್ಪರ್ಧಿಸುವಂತೆ ಒತ್ತಾಯ ಬಂದಿತ್ತು
ಈ ಬಾರಿ ಚುನಾವಣೆಯಲ್ಲಿ ತಮ್ಮ ಸೊಸೆ ಸ್ಪರ್ಧಿಸುವಂತೆ ಒತ್ತಾಯ ಬಂದಿದ್ದು ನಿಜ. ಹಿರಿಯರು ನನ್ನ ಸೊಸೆಗೆ ಸ್ಪರ್ಧಿಸುವಂತೆ ಹೇಳಿದ್ದರು. ಆದರೆ, ನಾನು ಬೇಡ ಅಂದೆ. ನಮ್ಮ ಪಕ್ಷ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಬಾರಿ ಹಲವು ಮಹಿಳೆಯರಿಗೆ ಅವಕಾಶ ನೀಡಿದೆ. ನನ್ನ ವೈಯಕ್ತಿಕ ತೀರ್ಮಾನ ಬೇರೆ ಇರಬಹುದು. ಆದರೆ, ಹಿರಿಯ ಸೂಚನೆ ಪಾಲಿಸಲೇಬೇಕು ಎಂದು ಹೇಳಿದ್ದಾರೆ.