Monday, November 25, 2024

ಪುತ್ರರಿಗಾಗಿ ಟಿಕೆಟ್ ಕೇಳಿದ ‘ಬಿಜೆಪಿ ನಾಯಕರು’ : ಲೀಸ್ಟ್ ನಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ?

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಫೀವರ್ ಹೆಚ್ಚಾಗಿದ್ದು, ಹಿಂದೆ ಆರ್ಭಟಿಸಿದ್ದ ಕೆಲವು ರಾಜಕಾರಣಿಗಳು ಈ ಬಾರಿ ಸೈಲೆಂಟ್ ಆಗಿದ್ದಾರೆ. ಅಂದ ಮಾತ್ರಕ್ಕೆ ಕೈ ಕಟ್ಟಿ ಕುಳಿತಿಲ್ಲ. ಕೆಲವು ಹಿರಿಯ ನಾಯಕರು ಈ ಬಾರಿ ಚುನಾವಣಾ ಕಣದಿಂದ ಹಿಂದೆ ಸರಿದು ತಮ್ಮ ಪುತ್ರರಿಗೆ ರಾಜಕೀಯ ನೆಲೆ ನಿರ್ಮಿಸಲು ಮುಂದಾಗಿದ್ದಾರೆ.

ಚುನಾವಣಾ ಅಖಾಡಕ್ಕೆ ಆಡಳಿತರೂಢ ಬಿಜೆಪಿ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ನಾಯಕರು ಭರ್ಜರಿ ತಯಾರಿ ನಡೆಸ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಎರಡು ಪಟ್ಟಿ ರಿಲೀಸ್, ಜೆಡಿಎಸ್ ಒಂದು ಪಟ್ಟಿ ರಿಲೀಸ್ ಮಾಡಿದೆ. ಆದರೆ, ಬಿಜೆಪಿ ಪಟ್ಟಿ ಇನ್ನೂ  ರಿಲೀಸ್ ಆಗಿಲ್ಲ. ಬಿಜೆಪಿ ಹೈಕಮಾಂಡ್‌ ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸಿದೆ. ಮತ್ತೊಂದೆಡೆ, ಕೆಲ ಕಮಲ ನಾಯಕರು ತಮ್ಮ ಪುತ್ರರಿಗೆ ಟಿಕೆಟ್​ ನೀಡಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದಾರೆ. ಹಾಗಾದ್ರೆ, ಬಿಜೆಪಿಯಲ್ಲಿ ಪುತ್ರರಿಗೆ ಟಿಕೆಟ್ ಕೇಳಿದ ನಾಯಕರು ಯಾರು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು ಈಗಾಗಲೇ ಚುನಾವಣೆ ಸ್ಪರ್ಧೆ ಮಾಡಲ್ಲ ಎಂದು ಘೋಷಿಸಿದ್ದಾರೆ. ಬದಲಿಗೆ ಶಿಕಾರಿಪುರ ಕ್ಷೇತ್ರದ ಟಿಕೆಟ್​ ತಮ್ಮ ಪುತ್ರ ಬಿ.ವೈ ವಿಜಯೇಂದ್ರಗೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಬಿಎಸ್ ವೈ ಮನವಿಗೆ ವರಿಷ್ಠರು ಯೆಸ್ ಎಂದಿದ್ದು, ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆ ಮಾಡುವುದು ಬಹುತೇಕ ಫಿಕ್ಸ್ ಆಗಿದೆ.

ವಸತಿ ಸಚಿವ ವಿ.ಸೋಮಣ್ಣ ಸಹ ತಮ್ಮ ಪುತ್ರ ಡಾ. ಅರುಣ್ ಸೋಮಣ್ಣಗೆ ಈ ಬಾರಿ ಗುಬ್ಬಿ ಕ್ಷೇತ್ರದಿಂದ ಟಿಕೆಟ್​ ನೀಡಬೇಕೆಂದು ಹೈಕಮಾಂಡ್​ಗೆ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಸೋಮಣ್ಣ ಅವರು ಅಮಿತ್ ಶಾ ಸೇರಿದಂತೆ ಕೆಲ ಹೈಕಮಾಂಡ್​ ನಾಯಕರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಆದ್ರೆ, ಡಾ. ಅರುಣ್ ಸೋಮಣ್ಣ ಗುಬ್ಬಿ ಕ್ಷೇತ್ರದ ಟಿಕೆಟ್​ ಸಿಗುವುದು ಅನುಮಾನ ಎನ್ನಲಾಗಿದೆ.

ಮಾಜಿ ಸಚಿವ, ಹಾಲಿ ಶಿವಮೊಗ್ಗ ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ಅವರಿಗೆ ಈ ಬಾರಿ ಟಿಕೆಟ್​ ಸಿಗುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ. ಅವರ ವಯಸ್ಸು ಹಾಗೂ ಅವರ ಮೇಲಿನ ಕೆಲ ಆರೋಪಗಳಿಂದಾಗಿ ಅವರಿಗೆ ಟಿಕೆಟ್​ ಕಟ್​ ಆಗುವ ಸಾಧ್ಯತೆಗಳಿವೆ. ಇದರಿಂದ ಶಿವಮೊಗ್ಗ ಕ್ಷೇತ್ರದ ಟಿಕೆಟ್​ ತಮ್ಮ ಪುತ್ರ ಕಾಂತೇಶ್​ ಗೆ ಕೊಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಕೋಲಾರ, ಚಿಕ್ಕಬಳ್ಳಾಪುರ ಅಲ್ಲ, ಈ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ?

ದಾವಣಗೆರೆ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಸಹ ದಾವಣಗೆರೆ ಉತ್ತರ ಕ್ಷೇತ್ರದ ಟಿಕೆಟ್​ ತಮ್ಮ ಪುತ್ರ ಜಿ.ಎಸ್. ಅನಿತ್​ಗೆ ನೀಡುವಂತೆ ಮನವಿ ಮಾಡಿದ್ದಾರೆ. ಹಾಲಿ ಬಿಜೆಪಿ ಶಾಸಕ ಎಸ್.ಎ.‌ರವೀಂದ್ರನಾಥ ಅವರು ಈ ಬಾರಿ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದ ಟಿಕೆಟ್​ ತಮ್ಮ ಮಗನಿಗೆ ಕೊಡಿ ಎಂದು ಸಿದ್ದೇಶ್ವರ್ ಬೇಡಿಕೆ ಇಟ್ಟಿದ್ದಾರೆ.

ಇನ್ನು ಸಚಿವ ಎಂಟಿಬಿ ನಾಗರಾಜ್ ಸಹ ತಮ್ಮ ಪುತ್ರ ನಿತೀಶ್ ಪುರುಷೊತ್ತಮ್​ಗೆ ಹೊಸಕೋಟೆ ವಿಧಾನಸಭೆ ಕ್ಷೇತ್ರದ ಟಿಕೆಟ್​ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಕಳೆದ ಉಪಚುನಾವಣೆಯಲ್ಲಿ ಶರತ್ ಬಚ್ಚೇಗೌಡ ವಿರುದ್ಧ ಸೋಲುಕಂಡಿದ್ದ ಎಂಟಿಬಿ ನಾಗರಾಜ್​ ಅವರನ್ನು ವಿಧಾನಪರಿಷತ್ ಮೂಲಕ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್​ ಸಿಗುವುದು ಅನುಮಾನವಾಗಿದ್ದರಿಂದ ತಮ್ಮ ಮಗನಿಗೆ ಟಿಕೆಟ್​ ನೀಡಬೇಕೆಂದು ಮನವಿ ಮಾಡಿದ್ದಾರೆ.​

ಇನ್ನು ಮತ್ತೋರ್ವ ಬಿಜೆಪಿ ಶಾಸಕ ಜಿಹೆಚ್ ತಿಪ್ಪಾರೆಡ್ಡಿ ಅವರು ಕೂಡ ಈ ಬಾರಿ ಚಿತ್ರದುರ್ಗ ಕ್ಷೇತ್ರದ ಟಿಕೆಟ್​ ತಮ್ಮ ಪುತ್ರ ಡಾ. ಸಿದ್ಧಾರ್ಥ್ ಅವರಿಗೆ ನೀಡುವಂತೆ ಹೈಕಮಾಂಡ್​ ಬಳಿಕ ಹೇಳಿಕೊಂಡಿದ್ದಾರೆ. ತಿಪ್ಪಾರೆಡ್ಡಿ ಅವರಿಗೆ ವಯಸ್ಸಾದ ಕಾರಣ ಈ ಬಾರಿ ಟಿಕೆಟ್​ ಕೈತಪ್ಪುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ತಿಪ್ಪಾರೆಡ್ಡಿ ತಮ್ಮ ಪುತ್ರನಿಗೆ ಟಿಕೆಟ್​ ಬೇಡಿಕೆ ಇಟ್ಟಿದ್ದಾರೆ.

ಹುಕ್ಕೇರಿ ಬಿಜೆಪಿ ಟಿಕೆಟ್​ ತಮಗೆ ನೀಡವೇಕೆಂದು ದಿ. ಉಮೇಶ್ ಕತ್ತಿ ಕುಟುಂಬ ಒತ್ತಾಯಿಸಿದೆ. ಬಿಜೆಪಿ ಹಿರಿಯ ನಾಯಕರಾಗಿದ್ದ ಉಮೇಶ್ ಕತ್ತಿ ಅಕಾಲಿಕ ಮರಣ ಹೊಂದಿದ್ದರಿಂದ ಈ ಬಾರಿ ಹುಕ್ಕೇರಿ ಟಿಕೆಟ್​ ತಮ್ಮ ಕುಟುಂಬಕ್ಕೆ ಬೇಕೆಂದು ಪಟ್ಟು ಹಿಡಿದಿದ್ದಾರೆ.

ಸವದತ್ತಿ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಆನಂದ್ ಮಾಮನಿ ಅವರು ಅನಾರೋಗ್ಯ ಕಾರಣದಿಂದ ನಿಧನರಾಗಿದ್ದು, ಈ ಬಾರಿ ಸವದತ್ತಿ ಟಿಕೆಟ್​ ನಮ್ಮ ಕುಟುಂಬಕ್ಕೆ ನೀಡಬೇಕೆಂದು ಆನಂದ್ ಮಾಮನಿ ಫ್ಯಾಮಿಲಿ ಮನವಿ ಮಾಡಿದೆ.

ಒಟ್ನಲ್ಲಿ, ತಮ್ಮ ಬದಲಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಬೇಕು, ನಾವು ಮಕ್ಕಳನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಕಮಲ ನಾಯಕರು ಪಟ್ಟು ಹಿಡಿದ್ದಾರೆ. ಹೈಕಮಾಂಡ್ ಯಾರಿಗೆ ಟಿಕೆಟ್​ ನೀಡುತ್ತೆ ಎಂಬುವುದನ್ನು ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES