Friday, November 22, 2024

ನಾಳೆ ನಂಜನಗೂಡು ‘ಗೌತಮ ಪಂಚ ಮಹಾರಥೋತ್ಸವ’ : ರಥದ ತೂಕ ಎಷ್ಟು ಟನ್ ಗೊತ್ತಾ?

ಬೆಂಗಳೂರು : ದಕ್ಷಿಣ ಕಾಶಿ ಎಂದಾಕ್ಷಣ ಥಟ್ಟನೆ ನೆನಪಾಗುವುದು ಮೈಸೂರು ಜಿಲ್ಲೆ ನಂಜನಗೂಡು. ಇಲ್ಲಿ ನಡೆಯುವ ಶ್ರೀಕಂಠೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಮತ್ತೊಂದು ಆಕರ್ಷಣೆ.

ಹೌದು, ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ದೊಡ್ಡ ಜಾತ್ರಾ ಮಹೋತ್ಸವದ ಅಂಗವಾಗಿ ಗೌತಮ ಪಂಚ ಮಹಾರಥೋತ್ಸವಕ್ಕೆ ಸಿದ್ಧತೆ ಈಗಾಗಲೇ ಪೂರ್ಣಗೊಂಡಿವೆ.

ಏಪ್ರಿಲ್ 2(ನಾಳೆ) ರಂದು ಬೆಳಗ್ಗೆ 6ರಿಂದ 6.40ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಶ್ರೀ ಮನ್ಮಹಾಗೌತಮ ರಥಾರೋಹಣ ನೆರವೇರಲಿದ್ದು, ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜಾತ್ರೆಯ ಮತ್ತೊಂದು ಪ್ರಮುಖ ಆಕರ್ಷಣೆಯಾದ ತೆಪ್ಪೋತ್ಸವ ಏಪ್ರಿಲ್ 4ರಂದು ರಾತ್ರಿ 7 ಗಂಟೆಗೆ ಕಪಿಲಾ ನದಿಯಲ್ಲಿ ನಡೆಯಲಿದೆ.

ಶ್ರೀಕಂಠೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಜರುಗುವ ದೊಡ್ಡಜಾತ್ರೆಯ ರಥೋತ್ಸವದಲ್ಲಿ ಗಣಪತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ, ಪಾರ್ವತಿ ಹಾಗೂ ಶ್ರೀಕಂಠೇಶ್ವರಸ್ವಾಮಿ ಅವರು ಆಸೀನರಾಗಿರುವ 5 ಅಲಂಕೃತ ರಥಗಳು ಮೆರವಣಿಗೆಯಲ್ಲಿ ಸಾಗುತ್ತವೆ.

ಪೂರ್ಣಗೊಂಡ ಜಾತ್ರೆಯ ಸಿದ್ಧತೆ

ಜಾತ್ರಾ ಮಹೋತ್ಸವದ ಪ್ರಯುಕ್ತ ಗೌತಮ ರಥ ಹಾಗೂ ಪಾರ್ವತಮ್ಮನವರು ಆಸೀನರಾಗುವ ಚಿಕ್ಕರಥದ ಗಾಲಿಗಳನ್ನು ದುರಸ್ತಿಪಡಿಸಿ ಐದೂ ರಥಗಳಿಗೆ ಬಣ್ಣ ಬಳಿಯಲಾಗಿದೆ. ದೊಡ್ಡ ರಥವನ್ನು ಎಳೆಯಲು ನೆರವಾಗುವಂತೆ 300 ಅಡಿ ಉದ್ದದ ಬೃಹತ್‌ ಹಗ್ಗವನ್ನು ಖರೀದಿಸಿ ರಥಕ್ಕೆ ಅಳವಡಿಸಲಾಗಿದೆ.

ಲಕ್ಷಕ್ಕೂ ಹೆಚ್ಚು ಭಕ್ತರು ಭಾಗಿ

ಜಾತ್ರೆಗೆ ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸುವ ಜೊತೆಗೆ ಜಾತ್ರೆಯ ಸಮಯದಲ್ಲಿ ಹೆಚ್ಚಿನ ಜನ ಸಂದಣಿ ಇರುವ ನದಿ ತೀರ, ದೇವಾಲಯದ ಆವರಣ, ದಾಸೋಹ ಭವನ ಇನ್ನಿತರ ಪ್ರದೇಶಗಳಲ್ಲಿ ಕಳ್ಳತನ ಅಥವಾ ಇನ್ನಿತರ ಅಕ್ರಮ ಚಟುವಟಿಕೆಗಳು ಜರುಗದಂತೆ ಸಿಸಿ ಕ್ಯಾಮೆರಾ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ.

90 ಅಡಿ ಎತ್ತರದ ಬೃಹತ್‌ ರಥ

ಗೌತಮ ರಥ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಸುಮಾರು 10 ಅಡಿ ವ್ಯಾಸದ ಆರು ಬೃಹತ್‌ ಚಕ್ರಗಳನ್ನು ಒಳಗೊಂಡಿದೆ. ನೆಲದಿಂದ ಸುಮಾರು 90 ಅಡಿ ಎತ್ತರದ ಬೃಹತ್‌ ರಥ ಅಂದಾಜು 110 ಟನ್‌ ತೂಕವನ್ನು ಹೊಂದಿದೆ. ಗೌತಮ ರಥದ ಉತ್ಸವ ಮಂಟಪ ವಿಶಿಷ್ಟ ಕಲಾ ಕೆತ್ತನೆಯಿಂದ ಕೂಡಿದ್ದು, ಜಾತ್ರೆ ಸಂದರ್ಭ ನಾನಾ ಬಣ್ಣಗಳ ವಸ್ತ್ರಗಳು, ವಿವಿಧ ಬಗೆಯ ಪುಷ್ಪಗಳು ಹಾಗೂ ಬಣ್ಣದ ಧ್ವಜಗಳನ್ನು ರಥಕ್ಕೆ ಕಟ್ಟಿ ಸಿಂಗರಿಸಲಾಗುತ್ತದೆ.

1.5 ಕಿ.ಮೀ ದೂರದ ರಥಬೀದಿಯಲ್ಲಿ ಒಂದು ಸುತ್ತು ಐದೂ ರಥಗಳನ್ನು ಎಳೆಯುವ ಮೂಲಕ ಭಕ್ತಾಗಳು ಸಂಭ್ರಮಿಸಲಿದ್ದಾರೆ.

RELATED ARTICLES

Related Articles

TRENDING ARTICLES