ಬೆಂಗಳೂರು : ಮತ್ತೊಮ್ಮೆ 2023ರಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ ಬೊಮ್ಮಾಯಿ, ಒಂದೂವರೆ ವರ್ಷದಲ್ಲಿ ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ 5-6 ಬಾರಿ ಭೇಟಿ ನೀಡಿದ್ದು, ಕಳೆದ ಮೂರು ತಿಂಗಳಲ್ಲಿ ಪ್ರವಾಸ ಮಾಡದ ಜಿಲ್ಲೆಯೇ ಇಲ್ಲ. ನಮಗೆ ಸಂಪೂರ್ಣ ಹಾಗೂ ಸ್ಪಷ್ಟ ಬಹುಮತ ಬರುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ನೀತಿ ಸಂಹಿತೆ ಪ್ರಕಾರ ನಡೆದುಕೊಳ್ಳಲಿ
ಕಳೆದ ಬಾರಿ 27ನೇ ತಾರೀಖು ಚುನಾವಣೆ ಘೋಷಣೆಯಾಗಿತ್ತು. 27ರ ನಂತರ ಯಾವ ದಿನವಾದರೂ ಚುನಾವಣಾ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿತ್ತು. ನೀತಿ ಸಂಹಿತೆ ಕೂಡ ಜಾರಿಯಾಗಲಿದ್ದು, ಎಲ್ಲಾ ಪಕ್ಷಗಳೂ ನೀತಿ ಸಂಹಿತೆಯ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ. ಸ್ವತಂತ್ರ ಮತ್ತು ನ್ಯಾಯೋಚಿತ ಚುನಾವಣೆಗೆ ಎಲ್ಲರೂ ಸಹಕರಿಸಬೇಕು ಎಂದು ಸಿಎಂ ಬೊಮ್ಮಾಯಿ ವಿನಂತಿ ಮಾಡಿದ್ದಾರೆ.
ವ್ಯಾಪಕ ಪ್ರಚಾರ ಆಗಲಿದೆ
ಈ ಬಾರಿಯ ಪ್ರಚಾರ ಗರಿಷ್ಠ ಜನರನ್ನು ತಲುಪುವ ಪ್ರಚಾರ. ಡಿಜಿಟಲೈಜೇಶನ್ ಬಳಕೆ, ನಾಯಕರ ವ್ಯಾಪಕ ಪ್ರಚಾರ, ಪ್ರವಾಸ, ಪ್ರತಿ ಮತದಾರರಿಗೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಕೇಂದ್ರ ರಾಜ್ಯ ಸರ್ಕಾರಗಳ ಯೋಜನೆಗಳನ್ನು ತಿಳಿಸಿದ್ದಾರೆ. ಪ್ರಚಾರ ವಿವಿಧ ಹಂತಗಳಲ್ಲಿರುತ್ತದೆ. ನಾಯಕರು ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ, ರಾಷ್ಟ್ರೀಯ ನಾಯಕರು ರಾಜ್ಯ ಮಟ್ಟದಲ್ಲಿ ಪ್ರಚಾರ ಮಾಡಲಿದ್ದು, ವ್ಯಾಪಕ ಪ್ರಚಾರ ಆಗಲಿದೆ ಎಂದು ಹೇಳಿದ್ದಾರೆ.
ಪ್ರಮುಖ ಅಭಿವೃದ್ಧಿ ಕಾರ್ಯ ಕ್ರಮಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಕೆಲವು ಯೋಜನೆಗಳಿಗೆ ಅಡಿಗಲ್ಲು ಹಾಕುವುದು ಎಲ್ಲಾ ಸರ್ಕಾರಗಳ ಕಾಲದಲ್ಲಿಯೂ ಉಳಿಯುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾತಿ ತಿಳಿಸಿದ್ದಾರೆ.