ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟದ ಹಿಂದೆ ಶಿವಮೊಗ್ಗದ ಸ್ಥಳೀಯ ಕಾಂಗ್ರೆಸ್ ಮುಖಂಡರ ಕೈವಾಡವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ನಾವು ಸದಾಶಿವ ವರದಿಯಂತೆ ಮೀಸಲಾತಿ ಅನುಷ್ಠಾನ ಮಾಡಿಲ್ಲ. ನಮ್ಮ ಸಚಿವ ಸಂಪುಟ ತೀರ್ಮಾನದಂತೆ ಮಾಡಿದ್ದೇವೆ. ಕಾಂಗ್ರೆಸ್ ಅವರ ಕೃತ್ಯವನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಶಕುನಿ ಕೆಲಸ ಮಾಡುತ್ತಿದೆ
ಸಮಾಜ ಪ್ರಕ್ಷುಬ್ಧಗೊಳಿಸುವಂತಹ ಕೆಲಸ ಮಾಡಬಾರದು. ರಾಜಕೀಯ ಲಾಭಕ್ಕಾಗಿ ಇಂತಹ ಕೃತ್ಯ ಮಾಡುತ್ತಿದ್ದಾರೆ. ಒಂದು ರಾಷ್ಟ್ರೀಯ ಪಕ್ಷ ಮಾಡುವಂತಹ ಕೆಲಸವಲ್ಲ. ಈ ಕೃತ್ಯ ಕ್ಷಮೆಗೆ ಅರ್ಹವಲ್ಲ. ಕಾಂಗ್ರೆಸ್ ಶಕುನಿ ಕೆಲಸ ಮಾಡುತ್ತಿರುವ ಬಗ್ಗೆ ಸುರ್ಜೆವಾಲ ಹೇಳಬೇಕು ಎಂದು ಸಿಎಂ ಬೊಮ್ಮಾಯಿ ಕಿಡಿಕಾರಿದ್ದಾರೆ.
ಬಿಎಸ್ ವೈ ತವರಲ್ಲಿ ನಿಷೇಧಾಜ್ಞೆ
ರಾಜ್ಯ ಬಿಜೆಪಿ ಸರ್ಕಾರದ ಒಳ ಮೀಸಲಾತಿ ಯನ್ನು ವಿರೋಧಿಸಿ ಬಂಜಾರ ಸಮುದಾಯ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಶಿಕಾರಿಪು ಮನೆಯ ಮೇಲೆ ಕಲ್ಲ ತೂರಾಟನಡೆಸಿತ್ತು. ಪರಿಣಾಮ ಬಿಎಸ್ ವೈ ನಿವಾಸದ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ತಹಶೀಲ್ದಾರ್ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಿ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಘಟನಾ(ಬಿ.ಎಸ್.ವೈ ಮನೆ) ಸ್ಥಳದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಗೆ ಸಾರ್ವಜನಿಕರು ಸುಳಿಯುವಂತಿಲ್ಲ.