ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ವಿಧಾನಸಭಾ ಚುನಾವಣಾ ಫೀವರ್. ರಾಜ್ಯದತ್ತ ಮುಖ ಮಾಡುತ್ತಿರುವ ರಾಷ್ಟ್ರೀಯ ನಾಯಕರ ದಂಡು. ಈ ಮಧ್ಯೆ ಆಡಳಿರೂಢ ಬಿಜೆಪಿ ಪಕ್ಷದ ಹೊಸ ಹೊಸ ಯೋಜನೆಗಳ ಘೋಷಣೆ. ಇಷ್ಟು ಸಾಕಲ್ಲವೇ ಚುನಾವಣಾ ಕಣ ರಂಗೇರಲು.
ಹೌದು, ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಅತಿ ದೊಡ್ಡ ಘೋಷಣೆಯೊಂದನ್ನು ಮಾಡಿದ್ದಾರೆ. ಕರ್ನಾಟಕ ಸೇರಿ 7 ರಾಜ್ಯಗಳಿಗೆ ಪಿಎಂ ಮಿತ್ರ ಮೆಗಾ ಜವಳಿ ಪಾರ್ಕ್ ಘೋಷಿಸಿದ್ದಾರೆ.
ಜವಳಿ ಕ್ಷೇತ್ರದಲ್ಲಿ ಅಪಾರ ಹೂಡಿಕೆಯನ್ನು ಆಕರ್ಷಿಸಿ, ಉದ್ಯೋಗ ಸೃಷ್ಟಿಗೆ ಕರ್ನಾಟಕ ಸೇರಿ ಏಳು ರಾಜ್ಯಗಳಲ್ಲಿ ‘ಪಿಎಂ ಮಿತ್ರ ಮೆಗಾ ಟೆಕ್ಸ್‌ಟೈಲ್ ಪಾರ್ಕ್’ ನಿರ್ಮಾಣ ಮಾಡಲಾಗುತ್ತದೆ ಎಂದು ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮತ್ತು ಯುಪಿಯಲ್ಲಿ ಪಾರ್ಕ್ ಸ್ಥಾಪಿಸಲಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ.
ಅದೇ ರೀತಿ, ಪಿಎಂ ಮಿತ್ರ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗಳು ಜವಳಿ ಕ್ಷೇತ್ರಕ್ಕೆ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒದಗಿಸುತ್ತವೆ. ಕೋಟಿಗಟ್ಟಲೆ ಹೂಡಿಕೆಯನ್ನು ಆಕರ್ಷಿಸುತ್ತವೆ ಮತ್ತು ಲಕ್ಷಗಟ್ಟಲೆ ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಇದು ‘ಮೇಕ್ ಇನ್ ಇಂಡಿಯಾ’ ಮತ್ತು ‘ಮೇಕ್ ಫಾರ್ ದಿ ವರ್ಲ್ಡ್’ಗೆ ಉತ್ತಮ ಉದಾಹರಣೆಯಾಗಲಿದೆ ಎಂದು ಅವರು ಹೇಳಿದ್ದಾರೆ.