ರಾಜಸ್ಥಾನ : ಈ ದಂಪತಿ ಮದಿವೆಯಾಗಿ 18 ವರ್ಷಗಳು ಕಳೆದರೂ ಮಗುವಾಗಿರಲಿಲ್ಲ. ತಮಗೆ ಯಾರಾರು ಏನು ಹೇಳುತ್ತಾರೋ ಅದೆಲ್ಲವನ್ನೂ ಮಾಡಿದ್ದಾರೆ. ದೇವರು, ಪೂಜೆ-ಪುನಸ್ಕಾರ, ವ್ರಥ, ಹರಕೆ, ಪಥ್ಯ, ಆಯುರ್ವೇದ, ಗಿಡಮೂಲಿಕೆ ಹಾಗೂ ಆಸ್ಪತ್ರೆ ಚಿಕಿತ್ಸೆ ಸೇರಿ ನೂರಾರು ಕಾರ್ಯಗಳನ್ನು ಮಾಡಿದ್ದಾರೆ. 18 ವರ್ಷಗಳ ನಂತರ ದಂಪತಿಗೆ ಗಂಡು ಮಗು ಜನಿಸಿದೆ. ಆದರೆ, ಈ ಗಂಡು ಮಗು ಕೇವಲ 14 ತಿಂಗಳು ಕೂಡ ಬದುಕಲಿಲ್ಲ. ವಿಕ್ಸ್ ಡಬ್ಬಿ ನುಂಗಿ, ಸಕಾಲಕ್ಕೆ ಚಿಕಿತ್ಸೆ ಸಿಗದೇ ತಂದೆ-ತಾಯಿಯ ಕೈಯಲ್ಲಿರುವಾಗಲೇ ಉಸಿರು ಚೆಲ್ಲಿದೆ.
ಪಾಲಕರ 18 ವರ್ಷದ ಕಠಿಣ ವ್ರತಾಚರಣೆಯ ನಂತರ ಹುಟ್ಟಿದ ಮಗು, ವಿಕ್ಸ್ ಡಬ್ಬಿಯ ಮುಚ್ಚಳದಿಂದಾಗಿ 14 ತಿಂಗಳ ನಂತರ ಸಾವನ್ನಪ್ಪಿದೆ. ಈ ಘಟನೆ ರಾಜಸ್ಥಾನದ ಬಾಂಸ್ವಾಡದ ಲೋಹಾರಿ ಠಾಣಾ ಪ್ರದೇಶದ ಸರೆಡಿ ಪಟ್ಟಣದಲ್ಲಿ ನಡೆದಿದೆ. ಇನ್ನು 14 ತಿಂಗಳ ಮಗುವಿನ ಸಾವು ಇಡೀ ಗ್ರಾಮವನ್ನೇ ಶೋಕದಲ್ಲಿ ಮುಳುಗಿಸಿದೆ. ಆಟವಾಡುವಾಗ ಮಗು ವಿಕ್ಸ್ ಡಬ್ಬಿಯ ಮುಚ್ಚಳವನ್ನು ನುಂಗಿತ್ತು, ಆದರೆ, ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣ ಅದರ ಪ್ರಾಣ ಹೋಯಿತು.
ಸರೆಡಿ ಗ್ರಾಮದ ನಿವಾಸಿ ಹೀರೆನ್ ಜೋಶಿ ಅವರ ಮಗ ಮಾನ್ವಿಕ್ ಸೋಮವಾರ ರಾತ್ರಿ ವಿಕ್ಸ್ ಡಬ್ಬಿಯ ಜೊತೆಗೆ ಆಟವಾಡುತ್ತಿದ್ದನು. ಆಟವಾಡುವಾಗ ಡಬ್ಬಿಯ ಮುಚ್ಚಳ ನುಂಗಿದೆ. ಆಗ, ಬಾಯಿಂದ ಮುಚ್ಚಳ ತೆಗೆಯಲು ಪ್ರಯತ್ನ ಮಾಡಿದರೂ ಸಾಧ್ಯವಾಗದೇ ಮಗುವಿನ ಸ್ಥಿತಿ ಹದಗೆಡುತ್ತಿತ್ತು. ಇದನ್ನು ನೋಡಿದ ಪೋಷಕರು ತಕ್ಷಣ ಸರೆಡಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ, ಅಲ್ಲಿ ವೈದ್ಯರು ಸಿಗದ ಕಾರಣ ಅವರಿಗೆ ನಿರಾಸೆಯಾಯಿತು. ಆರೋಗ್ಯ ಕೇಂದ್ರದಲ್ಲಿ ಕೇವಲ ಒಬ್ಬ ನರ್ಸ್ ಮತ್ತು ಕಾಯಂ ಸಿಬ್ಬಂದಿ ಇದ್ದರು. ವೈದ್ಯರ ಅನುಪಸ್ಥಿತಿಯಿಂದಾಗಿ ಪೋಷಕರು ಮಗುವನ್ನು ಬಾಂಸ್ವಾಡ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು, ಆದರೆ, ದಾರಿ ಮಧ್ಯೆ ಮಗು ಸಾವನ್ನಪ್ಪಿತು. ದುಃಖಿತ ಪೋಷಕರು ಮಗುವನ್ನು ಮನೆಗೆ ಕರೆದೊಯ್ದರು.