ಇಂದೋರ್ : ನಗರವನ್ನು ಭಿಕ್ಷುಕರಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಇದರ ಅನ್ವಯ ಭಿಕ್ಷೆ ನೀಡುವವರ ವಿರುದ್ಧ 2025ರ ಜನವರಿ 1ರಿಂದ ಎಫ್‌ಐಆರ್ ದಾಖಲಿಸಲಾಗುವುದು ಎಂದು ಜಿಲ್ಲಾ ಅಧಿಕಾರಿ ಅಶಿಶ್ ಸಿಂಗ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದೋರ್‌ನಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಿ ಈಗಾಗಲೇ ಆದೇಶ ಹೊರಡಿಸಲಾಗಿದೆ. ಭಿಕ್ಷಾಟನೆ ವಿರುದ್ಧ ನಮ್ಮ ಜಾಗೃತಿ ಅಭಿಯಾನ ಈ ತಿಂಗಳ (ಡಿಸೆಂಬರ್) ಅಂತ್ಯದವರೆಗೆ ನಡೆಯಲಿದೆ. ಜನವರಿ 1 ರಿಂದ ಯಾವುದೇ ವ್ಯಕ್ತಿ ಭಿಕ್ಷೆ ನೀಡುತ್ತಿರುವುದು ಕಂಡುಬಂದರೆ, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜನರನ್ನು ಭಿಕ್ಷೆ ಬೇಡುವಂತೆ ಪ್ರೇರೇಪಿಸುತ್ತಿದ್ದ ವಿವಿಧ ಗ್ಯಾಂಗ್‌ಗಳನ್ನು ಪತ್ತೆಹಚ್ಚಲಾಗಿದೆ. ಅಲ್ಲದೇ ಭಿಕ್ಷಾಟನೆಯಲ್ಲಿ ತೊಡಗಿರುವ ಅನೇಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಭಿಕ್ಷೆ ನೀಡುವ ಮೂಲಕ ಪಾಪದಲ್ಲಿ ಪಾಲುದಾರರಾಗಬೇಡಿ ಎಂದು ಇಂದೋರ್‌ನ ಎಲ್ಲಾ ನಿವಾಸಿಗಳಿಗೆ ನಾನು ಮನವಿ ಮಾಡುತ್ತೇನೆ ಎಂದು ಜಿಲ್ಲಾಧಿಕಾರಿ ಹೇಳಿದರು.