ಬೆಂಗಳೂರು : ಮೈಸೂರಿನ ಮೂಡಾ ಕರ್ಮಕಾಂಡಗಳು ಬಗೆದಷ್ಟು ಬಯಲಾಗುತ್ತಿದ್ದು. 60*40 ಅಳತೆಯ ಸೈಟ್ಗಳನ್ನು ಕೇವಲ 3000 ಸಾವಿರಕ್ಕೆ ಮಾರಾಟ ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ. ಮೂಡಾದ ಹಿಂದಿನ ಆಯುಕ್ತರಿಂದ ಈ ರೀತಿಯ ಅಕ್ರಮ ನಡೆದಿದೆ ಎಂದು ವಕೀಲ ರವಿಕುಮಾರ್ ಎಂಬುವವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮತ್ತೊಂದು ಕರ್ಮಕಾಂಡ ಬಯಲಾಗಿದ್ದು. ರಿಯಲ್ ಎಸ್ಟೇಟ್ ಉದ್ಯಮಿ ಜೊತೆ ಸೇರಿ ಮುಡಾ ಅಧಿಕಾರಿಗಳ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಂಜುನಾಥ್ ಎಂಬ ಒಬ್ಬನೇ ವ್ಯಕ್ತಿಯಿಂದ ಸರ್ಕಾರಕ್ಕೆ ಸುಮಾರು 300 ಕೋಟಿಗು ಅಧಿಕ ನಷ್ಟವಾಗಿದೆ ಎಂದು ತಿಳಿದು ಬಂದಿದೆ. ಇದರ ಕುರಿತು ವಕೀಲ ರವಿಕುಮಾರ್ ಎಂಬುವವರು ಸಂಪೂರ್ಣ ದಾಖಲೆಯ ಸಮೇತ ಮೋದಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್, ವಿಶೇಷ ತಹಶೀಲ್ದಾರ್ ಶಿವಕುಮಾರ್, ಹೆಚ್ಚುವರಿ ಜಿಲ್ಲಾ ನೋಂದಣಾಧಿಕಾರಿ ಶ್ರೀಮತಿ.ಕಾವ್ಯ, ರಿಯಲ್ ಎಸ್ಟೇಟ್ ಉದ್ಯಮಿ ಎನ್.ಮಂಜುನಾಥ್ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಏನಿದು 300 ಕೋಟಿಯ ಆರೋಪ !
ಮೈಸೂರಿನ ರಿಯಲ್ ಎಸ್ಟೇಟ್ ಉದ್ಯಮಿ ಎನ್.ಮಂಜುನಾಥ್ಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ದಿನಾಂಕ.05.04.2023, 06.04.2023, 18.04.2023 ಹಾಗೂ 19.04.2023 ರಂದು ಸುಮಾರು 35ಕ್ಕೂ ಹೆಚ್ಚು ಕ್ರಯಪತ್ರಗಳ ಮೂಲಕ ಸೈಟ್ಗಳನ್ನು ಉದ್ಯಮಿ ಮಂಜುನಾಥ್ಗೆ ಬರೆದುಕೊಟ್ಟಿದ್ದಾರೆ. ಮೂಲ ಮಾಲೀಕರ ಹೆಸರನ್ನು ದಾಖಲಿಸದೆ GPA ಪ್ರತಿನಿಧಿಗೆ ನೇರವಾಗಿ ಕ್ರಯ ಮಾಡಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.
ಮೂಡಾ ಅಧಿಕಾರಿಗಳು ಉದ್ಯಮಿ ಮಂಜುನಾಥ್ಗೆ ವಿಜಯನಗರ ಬಡಾವಣೆಯ 3 ಮತ್ತು 4ನೇ ಹಂತದಲ್ಲಿ ನಿವೇಶನಗಳನ್ನು ಮಂಜೂರು ಮಾಡಿದ್ದು. ಕನಿಷ್ಟ ಒಂದು ಕೋಟಿಗು ಹೆಚ್ಚು ಮೌಲ್ಯ ಹೊಂದಿರುವ ನಿವೇಶನಗಳನ್ನು ಕೇವಲ 3000 ರೂಪಾಯಿಗೆ ಮಾರಟಾ ಮಾಡಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ಪ್ರತಿ ಸೈಟ್ನಿಂದ 97 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಉಪ ನೋಂದಾಣಾಧಿಕಾರಿಯು ಕೂಡ ಈ ಶಾಮೀಲಿನಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪ ಮಾಡಿದ್ದು. ಇದರ ಕುರಿತು ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಲೋಕಾಯುಕ್ತ ಪೋಲಿಸರಿಗೆ ದೂರು ನೀಡಿದ್ದು. ಆದರೂ ಪೋಲಿಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಕೀಲ ರವಿಕುಮಾರ್ ಪ್ರಧಾನಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಧಾನಿ ಮೋದಿಗೆ ಪತ್ರ ಬರೆದ ವಕೀಲ !
ಮೂಡಾದಲ್ಲಿ ಆಗಿರುವ ಅಕ್ರಮಗಳ ಕುರಿತು ಕ್ರಮ ಕೈಗೊಳ್ಳುವಂತೆ ವಕೀಲ ರವಿಕುಮಾರ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು. ಸುಮಾರು 256 ಪುಟಗಳ ಸುದೀರ್ಘ ಪತ್ರ ಬರೆದು ಮೂಡಾದಲ್ಲಿ ಆಗಿರುವ ಸಕ್ರಮಗಳ ಕುರಿತು ವಿವರಿಸಿದ್ದಾರೆ.
19-07-2024 ರಂದು ಪ್ರಧಾನ ಮಂತ್ರಿಗೆ ದಾಖಲೆ ಸಮೇತ ದೂರು ಸಲ್ಲಿಸಿರುವ ವಕೀಲ ರವಿಕುಮಾರ್. ಮುಡಾ ಮಾಜಿ ಆಯುಕ್ತರಾದ ದಿನೇಶ್ ಮತ್ತು ಡಿ.ಬಿ.ನಟೇಶ್ ಇಬ್ಬರೆ ನೂರು ಕೋಟಿಗು ಅಧಿಕ ಆರ್ಥಿಕ ನಷ್ಟ ಮಾಡಿದ್ದಾರೆ ಎಂದು ತಮ್ಮ ಪತ್ರದಲ್ಲಿ ನಮೂದಿಸಿದ್ದಾರೆ. ಸೇಲ್ ಡೀಡ್ ಮತ್ತು ಸೆಟಲ್ ಮೆಂಟ್ ಡೀಡ್ ಮೂಲಕ ದೊಡ್ಡ ಮಟ್ಟದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದು. ಈ ಕುರಿತು ಸಿಬಿಐ ತನಿಖೆ ನಡೆಸಿ ಎಂದು ಆಗ್ರಹಿಸಿದ್ದಾರೆ.