ಜೈಪುರ್ : ದೇಶದಲ್ಲಿ ಮೊಘಲರ ಆಕ್ರಮಣದ ಸಂದರ್ಭದಲ್ಲಿ ಬಾಬರ್ ಮತ್ತು ಔರಂಗಜೇಬ್ ಬಹಳಷ್ಟು ದೇವಸ್ಥಾನಗಳನ್ನು ಕೆಡವಿ ಮಸೀದಿ ನಿರ್ಮಿಸಿದ್ದಾರೆ ಎಂದು ರಾಜಸ್ಥಾನದ ಶಿಕ್ಷಣ ಸಚಿವ ಮದನ್ ದಿಲಾವರ್ ಹೇಳಿದ್ದಾರೆ.
ಅಜ್ಮೀರ್ನಲ್ಲಿರುವ ಸೂಫಿ ಸಂತ ಮೊಯಿನುದ್ದೀನ್ ಚಿಶ್ವಿದರ್ಗಾ ಒಳಗಡೆ ಶಿವನ ದೇವಸ್ಥಾನವಿದೆ ಎಂಬುದಾಗಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಜ್ಮೀರ್ ದರ್ಗಾ ಸಮಿತಿ ಮತ್ತು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ಸ್ಥಳೀಯ ನ್ಯಾಯಾಲಯವೊಂದು ನೋಟಿಸ್ ಜಾರಿ ಮಾಡಿದ್ದು, ಈ ಕುರಿತಂತೆ ಸಚಿವರು ಪ್ರತಿಕ್ರಿಯಿಸಿದ್ದಾರೆ.
ಒಂದು ವೇಳೆ ನ್ಯಾಯಾಲಯದ ಆದೇಶದ ಮೇಲೆ ಉತ್ಪನನ ನಡೆದರೆ, ಅಲ್ಲಿ ಕಂಡುಬರುವ ಅವಶೇಷಗಳ ಆಧಾರದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ವಿಶ್ವದಾದ್ಯಂತ ಹೆಸರುವಾಸಿಯಾಗಿರುವ ಅಜ ದರ್ಗಾಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ‘ದೇಶದ ಬಹಳಷ್ಟು ದೇಗುಲಗಳನ್ನು ಕೆಡವಿ, ಬಾಬರ್ ಮತ್ತು ಔರಂಗಜೇಬ್ ಮಸೀದಿಗಳನ್ನು ನಿರ್ಮಿಸಿರುವುದು ಸತ್ಯ. ನ್ಯಾಯಾಲಯ ಉತ್ಪನನಕ್ಕೆ ಆದೇಶಿಸಿದರೆ ಅಲ್ಲಿ ಸಿಗುವ ಅವಶೇಷಗಳ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ’ ಎಂದಿದ್ದಾರೆ.