Saturday, January 11, 2025

ಅದಾನಿ ವಿರುದ್ದ ಅರೆಸ್ಟ್​ ವಾರೆಂಟ್​ ಜಾರಿ : ಅದಾನಿ ಯೋಜನೆಗಳ ತನಿಖೆಗೆ ಆದೇಶಿಸಿದ ಶ್ರೀಲಂಕಾ

ಕೊಲಂಬೊ : ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಭಾರತದ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕ ನ್ಯಾಯಾಲವು ಬಂಧನ ವಾರೆಂಟ್ ಹೊರಡಿಸಿರುವ ಬೆನ್ನಲ್ಲೇ, ತನ್ನ ನೆಲದಲ್ಲಿ ಅದಾನಿ ಹೂಡಿಕೆಯ ಯೋಜನೆಗಳ ಕುರಿತು ಶ್ರೀಲಂಕಾ ಸರ್ಕಾರ ತನಿಖೆಗೆ ಆದೇಶಿಸಿದೆ.

ಈ ಕುರಿತು ಮಾಹಿತಿ ನೀಡಿದ ಸರ್ಕಾರದ ವಕ್ತಾರ ನಳಿಂದಾ ಜಯತಿಸ್ಸಾ, ‘ಅಧ್ಯಕ್ಷ ಅನುರಾ ದಿಸ್ಸನಾಯಕೆ ಅವರು ನಡೆಸಿದ ಮೊದಲ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದ್ದು, ಭಾರತ ಮೂಲದ ಅದಾನಿ ನಿರ್ಮಾಣ ಸಂಸ್ಥೆಯು ಶ್ರೀಲಂಕಾದಲ್ಲಿ ಹೂಡಿಕೆ ಮಾಡಿರುವ ಯೋಜನೆಗಳ ಕುರಿತು ಹಣಕಾಸು ಹಾಗೂ ವಿದೇಶಾಂಗ ಸಚಿವರು ಪರಿಶೀಲನೆ ನಡೆಸಬೇಕು ಎಂದು ಸೂಚಿಸಲಾಯಿತು’ ಎಂದಿದ್ದಾರೆ.

‘ಅದಾನಿ ಹೂಡಿಕೆ ಕುರಿತು ಎರಡು ತನಿಖೆಗಳು ನಡೆಯಲಿವೆ. ಇವುಗಳು ನೀಡುವ ವರದಿಯನ್ನು ಆಧರಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ’ ಎಂದಿದ್ದಾರೆ. ದಿಸ್ಸನಾಯಕೆ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡ ನಂತರ, ದೇಶದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿ, ಶ್ರೀಲಂಕಾದಿಂದ ದೋಚಿ ವಿದೇಶದಲ್ಲಿ ಬಚ್ಚಿಟ್ಟಿರುವ ದೇಶದ ಆಸ್ತಿಗಳನ್ನು ಮರಳಿ ತರಲಾಗುವುದು ಎಂದು ಭರವಸೆ ನೀಡಿದ್ದರು.

ಭಾರತ ಮೂಲದ ಬಹುಕೋಟಿ ಒಡೆಯ ಉದ್ಯಮಿ ಗೌತಮ್ ಅದಾನಿ ಅವರು ಭಾರತದಲ್ಲಿ ಕೈಗೊಳ್ಳಲು ಯೋಜಿಸಿರುವ ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಅಧಿಕಾರಿಗಳಿಗೆ 2 ಸಾವಿರ ಕೋಟಿಯಷ್ಟು ಲಂಚ ನೀಡಿರುವುದು ಹಾಗೂ ಅಮೆರಿಕದ ಹೂಡಿಕೆದಾರರ ದಿಕ್ಕು ತಪ್ಪಿಸಲು ಸುಳ್ಳು ಹೇಳಿ ವಂಚಿಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಮೆರಿಕದ ನ್ಯಾಯಾಲಯವು ಬಂಧನ ವಾರೆಂಟ್ ಹೊರಡಿಸಿದೆ. ಆದರೆ ಈ ಆರೋಪಗಳು ನಿರಾಧಾರ ಎಂದು ಅದಾನಿ ಸಮೂಹ ಹೇಳಿದೆ. ಪವನ ವಿದ್ಯುತ್‌ ಯೋಜನೆಗಾಗಿ ಅದಾನಿ ಸಮೂಹವು ದ್ವೀಪರಾಷ್ಟ್ರವಾದ ಶ್ರೀಲಂಕಾದಲ್ಲಿ 44.2 ಕೋಟಿ ಅಮೆರಿಕನ್ ಡಾಲರ್‌ನಷ್ಟು ಹೂಡಿಕೆ ಮಾಡಿದೆ. ಆದರೆ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಯೋಜನೆ ಕೈಗೊಳ್ಳದಂತೆ ನ್ಯಾಯಾಲಯ ತಡೆ ನೀಡಿದೆ.

RELATED ARTICLES

Related Articles

TRENDING ARTICLES