Wednesday, October 16, 2024

ಇದು ಆಟೋ ಚಾಲಕನೊಬ್ಬ ಕ್ರಿಕೆಟ್ ಕಪ್ ಎತ್ತಿ ಹಿಡಿದ ಯುವಕನ ಯಶೋಗಾಥೆ

ಪ್ರತಿಭೆ ಎಂಬುದು ಯಾರಪ್ಪನ ಮನೆಯ ಸ್ವತ್ತು ಅಲ್ಲ ಎಂದು ನಿರೂಪಿಸಿದ ಅನೇಕ ಕ್ರಿಕೆಟಿಗರು ಭಾರತ ತಂಡದಲ್ಲಿದ್ದಾರೆ. ಕೇವಲ ಉದಾಹರಣೆಗೆ ತೆಗೆದುಕೊಳ್ಳುವುದಾದರೆ. ಮುಂಬೈನ ಬೀದಿಗಳಲ್ಲಿ ಪಾನಿಪೂರಿ ಮಾರುತ್ತಿದ್ದ ಯಶಸ್ವಿ ಜೈಸ್ವಾಲ್ ಭಾರತ ಪರ ಸ್ಟಾರ್  ಆರಂಭಿಕ ಆಟಗಾರನಾಗಿದ್ದಾನೆ. ಅದೇ ರೀತಿ ರೈಲ್ವೇ ಟಿಕೆಟ್ ಕಲೆಕ್ಟರ್ ಆಗಿದ್ದ ಎಂ.ಎಸ್ ಧೋನಿ ಭಾರತಕ್ಕೆ ಎರಡೆರಡು ವಿಶ್ವಕಪ್​ಗಳನ್ನು ಗೆದ್ದು ತಂದಿದ್ದಾರೆ. ಈ ವರದಿಯು ಸಹ ಅಂತಹ ಬಡ ಯುವಕನ ಯಶಸ್ಸಿನ ಯಶೋಗಾಥೆಯಾಗಿದೆ. ಅವನ್ಯಾರು ಎಂದರೆ ಅವನೇ ಜುನೇದ್ ಖಾನ್.

ಜುನೇದ್ ಖಾನ್ ಮೂಲತಃ ಉತ್ತರ ಪ್ರದೇಶದ ಕನೌಜ್​ನವನು. ಬದುಕು ಕಟ್ಟಿಕೊಳ್ಳಲೆಂದು 10 ವರ್ಷಗಳ ಹಿಂದೆ ಮಹಾನಗರಿ ಮುಂಬೈಗೆ ಬರುತ್ತಾನೆ. ಮುಂಬೈ ಎಂಬ ಮಹಾನಗರದ ಸಮುದ್ರದಲ್ಲಿ ಜೀವನಕಟ್ಟಿಕೊಳ್ಳಲು ಆತ ಸಮುದ್ರದ ಅಲೆಗಳಿಗೆ ವಿರುಧ್ದವಾಗಿ ಈಜಲು ಶುರು ಮಾಡುತ್ತಾನೆ.

ಮುಂಬೈಗೆ ಕಾಲಿಟ್ಟ ಜುನೇದ್ ಮೊದಲಿಗೆ ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಶುರು ಮಾಡುತ್ತಾನೆ.  3ವರ್ಷಗಳ ಕಾಲ ಕೆಲಸ ಮಾಡಿದ ನಂತರ ಕೆಲಸವನ್ನು ತ್ಯಜಿಸಿ ನಂತರ ಬದುಕಿನ ಬಂಡಿಯನ್ನು ಆಟೋ ಮೂಲಕ ಓಡಿಸುವುದಾಗಿ ತೀರ್ಮಾನಿಸಿ ಆಟೋ ಓಡಿಸಲು ಮುಂದಾಗುತ್ತಾನೆ.  ಬಹುಶಃ ಜುನೇದ್​ನ  ಅದೃಷ್ಟವೆಂಬುದು ಅದರಲ್ಲಿಯೆ ಅಡಗಿತ್ತು ಎನಿಸುತ್ತದೆ.  ಆಟೋ ಓಡಿಸುತ್ತಿದ್ದ ಜುನೇದ್ ಒಂದು ದಿನ ಮುಂಬೈನ ಮಾಜಿ ವಿಕೆಟ್ ಕೀಪರ್ ಮನೀಶ್ ಬಂಗೇರ ಅವರ ‘ಸಂಜೀವನಿ ಕ್ರಿಕೆಟ್ ಅಕಾಡೆಮಿ’ಗೆ ತಲುಪುತ್ತಾನೆ.

ಈತನನ್ನು ನೋಡಿದ ಮನೀಶ್ ಬಗೇರಾ, ಅಕಾಡೆಮಿಯಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುವವರಿಗೆ  ಬೌಲಿಂಗ್ ಮಾಡುವೆಯ ಎಂದು ಕೇಳುತ್ತಾರೆ.  ಅಲ್ಲಿಯವರೆಗೆ ಟೆನಿಸ್ ಬಾಲ್ ಇಡಿದಿದ್ದ ಜುನೇದ್ ಅಂದು ಮೊದಲ ಬಾರಿಗೆ ಲೆದರ್ ಬಾಲ್ ಹಿಡಿಯುವ ಅವಕಾಶ ಪಡೆಯುತ್ತಾನೆ. ಜುನೇದ್  ಬೌಲಿಂಗ್​ನಿಂದ ಆಕರ್ಷಣೆಗೊಂಡ  ಮನೀಶ್ ಬಗೇರಾ ಪ್ರತಿ ದಿನ ನೀನೆ ಬೌಲಿಂಗ್ ಮಾಡು ಎಂದು ಹೇಳುತ್ತಾರೆ.

ಆದರೆ ಇದಕ್ಕೆ ಒಪ್ಪದ ಜುನೇದ್ ‘’ಕ್ರಿಕೆಟ್ ನಮ್ಮಂಥ ಬಡ ಹುಡುಗರಿಗಲ್ಲ ಸಾಬ್’’ ಎಂದು ಹೊರಟು ಬಿಡುತ್ತಾನೆ. ಆದರೆ ಮನೀಶ್ ಬಂಗೇರ ಹೇಳಿದ ಮಾತು ಮನಸ್ಸಲ್ಲೇ ಕೊರೆಯಲು ಶುರು ಮಾಡುತ್ತದೆ. ‘’ಅವರು ನನ್ನಲ್ಲೇನೋ ನೋಡಿದ್ದಾರೆ. ಯಾಕೆ ಒಂದು ಪ್ರಯತ್ನ ಮಾಡಬಾರದು’’ ಎಂದುಕೊಂಡವನೇ ಲೆದರ್ ಬಾಲ್ ಬೌಲಿಂಗ್ ಆರಂಭಿಸುತ್ತಾನೆ. ಹಾಗೆ ಶುರುವಾಗಿತ್ತು ಆಟೋ ಚಾಲಕನ ಕ್ರಿಕೆಟ್ ಪ್ರಯಾಣ.

ಒಮ್ಮೆ PJ Hindu Gymkhana ತಂಡದ ಪರ ಆಡುತ್ತಿದ್ದಾಗ. ಭಾರತ ಕ್ರಿಕೆಟ್ ತಂಡದ ಈಗಿನ ಅಸಿಸ್ಟೆಂಟ್ ಕೋಚ್ ಅಭಿಷೇಕ್ ನಾಯರ್ ಕಣ್ಣಿಗೆ ಜುನೇದ ಖಾನ್ ಬೀಳುತ್ತಾನೆ. ಹುಡುಗ ಆಟೋ ಓಡಿಸುತ್ತಾನೆ ಎಂಬುದು ಗೊತ್ತಾದಾಗ ಅಭಿಷೇಕ್ ನಾಯರ್’ಗೆ ಒಂದು ಕ್ಷಣ ಮಾತೇ ನಿಂತು ಹೋಗುತ್ತದೆ. ‘’ಆಟೋ ಓಡಿಸುವುದನ್ನು

ಇವತ್ತಿಗೇ ನಿಲ್ಲಿಸಿ ನಿನ್ನ ಸಮಯವನ್ನೆಲ್ಲಾ ಕ್ರಿಕೆಟ್’ಗೆ ಮೀಸಲಿಟ್ಟು ಬಿಡು’’ ಎನ್ನುತ್ತಾರೆ ಅಭಿಷೇಕ್ ನಾಯರ್. ತಮ್ಮದೇ ಕ್ರಿಕೆಟ್ ಅಕಾಡೆಮಿಯಲ್ಲಿ ಜುನೇದ್ ಖಾನ್’ಗೆ ಅಭ್ಯಾಸಕ್ಕೆ ಜಾಗ ನೀಡುತ್ತಾರೆ. 2024ರ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡದ ನೆಟ್ ಬೌಲರ್ ಆಗಿ ಜುನೇದ್’ನನ್ನು ಕರೆದೊಯ್ಯುತ್ತಾರೆ ಅಭಿಷೇಕ್ ನಾಯರ್.

ಹುಡುಗರಲ್ಲಿ ಪ್ರತಿಭೆಯಿದೆ ಎಂದಾಕ್ಷಣ ಅವರ ವಯಸ್ಸು, ಹಿನ್ನೆಲೆ ಯಾವುದನ್ನೂ ನೋಡದೆ merit ಮೇಲೆ ಅವಕಾಶ ಕೊಡುವುದು ಮುಂಬೈ ಕ್ರಿಕೆಟ್ ಸಂಸ್ಥೆಯ ಸ್ಪೆಷಾಲಿಟಿ. ಅದೇ ರೀತಿ ಜುನೇದ್ ಖಾನ್ ಆಟವನ್ನು ನೋಡಿದ ಮುಂಬೈ ಕ್ರಿಕೆಟ್ ಅಕಾಡೆಮಿ ಆತನಿಗೆ ಇರಾನಿ ಕಪ್ ಪಂದ್ಯದಲ್ಲಿ ಆಡಲು ಅವಕಾಶ ನೀಡುತ್ತದೆ.

ಇದೀಗ ಮುಂಬೈ ತಂಡ ಇರಾನಿಕಪ್ ಎತ್ತಿ ಹಿಡಿದಿದ್ದು. ತಂಡದ ಗೆಲುವಿನಲ್ಲಿ ಜುನೇದ್ ಖಾನ್ ಪ್ರಮುಖ ಪಾತ್ರ ವಹಿಸಿದ್ದಾನೆ.

ಈ ವರದಿ ಕೇವಲ ಒಬ್ಬ ಸಾಮಾನ್ಯ ಆಟೋ ಚಾಲಕ ಕ್ರಿಕೆಟಿಗನಾದ ಕಥೆಯಲ್ಲ. ಇದು ಯಾವುದೇ ಹಿನ್ನಲೆಯಿಲ್ಲದೆ ಇದ್ದರು ಸಹ ಪ್ರತಿಭೆಯೊಂದಿದ್ದರೆ ಯಾರು ಬೇಕಾದರು ಸಹ ಏನನ್ನಾದರು ಸಹ ಸಾಧಿಸಬಹುದು ಎಂದು ತೋರಿಸಿದ ಯುವಕನ ವರದಿಯಾಗಿದೆ.

RELATED ARTICLES

Related Articles

TRENDING ARTICLES