Thursday, September 12, 2024

ಅಣ್ಣಾವ್ರಿಗೆ ಎರಡು ಬಾರಿ ರಾಷ್ಟ್ರಪ್ರಶಸ್ತಿ ತಪ್ಪಿಸಿದ್ದು ಯಾರು..?ಅವಾರ್ಡ್​​ ‘ರಾಜ’ಕೀಯ

ಪ್ರತಿಸಾರಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಬಂದಾಗಲೂ ಒಂದು ಪ್ರಶ್ನೆ ಮೂಡುತ್ತೆ. ವರನಟ ಡಾ.ರಾಜ್​ಕುಮಾರ್​ಗ್ಯಾಕೆ ಈ ಪ್ರಶಸ್ತಿ ಬರಲಿಲ್ಲ. ರಾಜ್​ಕುಮಾರ್​ಗಿಂತ ನಟ ಬೇಕಾ..? ಅವರ ನಟನೆಗೆ ಅದ್ಯಾಕೆ ಒಂದೇ ರಾಷ್ಟ್ರಪ್ರಶಸ್ತಿ ಬರಲಿಲ್ಲ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆ ಕನ್ನಡಿಗರ ಮನಸಲ್ಲಿ ಇದ್ದೇ ಇದೆ. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.

ಯೆಸ್, ಪ್ರತಿ ಸಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅನೌನ್ಸ್ ಅದಾಗಲೂ ಈ ಪ್ರಶ್ನೆ ಕನ್ನಡಿಗರನ್ನ ಕಾಡುತ್ತೆ. ಈ ಬಾರಿ ಕನ್ನಡದ ರಿಷಬ್ ಶೆಟ್ಟಿ ಪಾಲಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಒಲಿದು ಬಂದಿದೆ. ಸಹಜವಾಗೇ ಇದು ಕನ್ನಡಿಗರಿಗೆ ಖುಷಿ ತಂದಿದೆ. ಅಸಲಿಗೆ ಕನ್ನಡದ ಮಟ್ಟಿಗೆ ಅತ್ಯುತ್ತಮ ನಟ ನ್ಯಾಷನಲ್ ಅವಾರ್ಡ್​ ಬಂದಿರೋದು 4 ಬಾರಿ ಮಾತ್ರ.

ಚೋಮನದುಡಿ ಸಿನಿಮಾಗೆ ವಾಸುದೇವರಾಯರಿಗೆ, ತಬರನ ಕಥೆ ಸಿನಿಮಾದ ನಟನೆಗೆ ಚಾರುಹಾಸನ್​ಗೆ ಮತ್ತು 2014ರಲ್ಲಿ ‘ನಾನು ಅವನಲ್ಲ ಅವಳು’ ಸಿನಿಮಾದ ನಟನೆಗೆ ಸಂಚಾರಿ ವಿಜಯ್​ಗೆ ಈ ಪ್ರಶಸ್ತಿ ಬಂದಿತ್ತು. ಇದೀಗ ರಿಷಬ್ ಈ ಅವಾರ್ಡ್ ಪಡೆದುಕೊಂಡು 4ನೇ ಬಾರಿ ಪ್ರಶಸ್ತಿಯನ್ನ ಕನ್ನಡಕ್ಕೆ ತಂದುಕೊಟ್ಟಿದ್ದಾರೆ.

ಹಾಗಾದ್ರೆ 90 ವರ್ಷಗಳ ಇತಿಹಾಸವಿರೋ ಕನ್ನಡ ಚಿತ್ರರಂಗದಲ್ಲಿ ಇವರುಗಳಷ್ಟೇ ಶ್ರೇಷ್ಟನಟರಾ..? ನೂರಾರು ಚಿತ್ರಗಳನ್ನ ಮಾಡಿದ ಅದ್ಭುತ ನಟರುಗಳಿಗೆ ಯಾಕೆ ರಾಷ್ಟ್ರಪ್ರಶಸ್ತಿ ಸಿಗಲಿಲ್ಲ. ಬೇರೆಲ್ಲಾ ಯಾಕೆ ನಮ್ಮ ವರನಟ ಡಾ.ರಾಜ್​ಕುಮಾರ್​ಗೆ ಯಾಕೆ ಈ ಪ್ರಶಸ್ತಿ ಕೊಡಲಿಲ್ಲ ಅನ್ನೋ ಪ್ರಶ್ನೆ ಕಾಡದೇ ಇರಲ್ಲ.

ಇದನ್ನೂ ಓದಿ: National Film Award 2024: ಕೆಜಿಎಫ್​ 2 & ಕಾಂತಾರ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ

ಅಸಲಿಗೆ 5 ದಶಕಗಳ ಕಾಲ ಕನ್ನಡ ಸಿನಿಮಾರಂಗದಲ್ಲಿ ನಟಸಾರ್ವಭೌಮನಾಗಿ ಮರೆದು 205 ಸಿನಿಮಾಗಳಲ್ಲಿ ನಟಿಸಿದ್ದಾರೆ ಡಾ.ರಾಜ್​ಕುಮಾರ್. ಅಣ್ಣಾವ್ರ ಕಲಾಸೇವೆಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿದೆ. ಜೀವನಚೈತ್ರ ಸಿನಿಮಾದ ಗಾಯನಕ್ಕೆ ಅತ್ಯುತ್ತಮ ಗಾಯಕ ರಾಷ್ಟ್ರಪ್ರಶಸ್ತಿ ಬಂದಿದೆ. ಆದ್ರೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಮಾತ್ರ ಅಣ್ಣಾವ್ರಿಗೆ ಸಿಗಲೇ ಇಲ್ಲ.

ಹಾಗ್ ನೋಡಿದ್ರೆ ಎರಡು ಬಾರಿ ಡಾ.ರಾಜ್​ಕುಮಾರ್ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ರೇಸ್​​ನಲ್ಲಿ ಕೊನೆ ಹಂತಕ್ಕೆ ಹೋಗಿದ್ರು. ಆದ್ರೆ  ಅದ್ಯಾವುದೋ ರಾಜಕೀಯ ರಾಜ್​ಗೆ ಪ್ರಶಸ್ತಿ ಸಿಗದಂತೆ ತಡೆದುಬಿಟ್ತು. 1971ರಲ್ಲಿ ಕಸ್ತೂರಿ ನಿವಾಸ ಸಿನಿಮಾಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಇನ್ನೇನು ಅನೌನ್ಸ್ ಆಗಿತ್ತು. ರಾತ್ರಿ ಆಕಾಶವಾಣಿಯಲ್ಲಿ ರಾಜ್​ಕುಮಾರ್​ಗೆ ಪ್ರಶಸ್ತಿ ಬಂದಿದೆ ಅಂತ ಪ್ರಕಟ ಕೂಡ ಆಗಿತ್ತು. ಆದ್ರೆ ರಾತ್ರೋರಾತ್ರಿ ಪ್ರಭಾವ ಬೀರಿ ಆ ಪ್ರಶಸ್ತಿಯನ್ನ ಎಂ.ಜಿ.ಆರ್​ಗೆ ಕೊಟ್ಟುಬಿಟ್ರು.

ಇದನ್ನೂ ಓದಿ: “ಗೌರಿ” ಸಮರ ಶುರು, ಯುವ ಜೋಡಿಗೆ ಸೈ ಅಂದ್ರಾ ಪ್ರೇಕ್ಷಕರು!?: ಪವರ್​ ರಿವ್ಯೂ

ಇನ್ನೂ 1977ರಲ್ಲೂ ಸನಾದಿ ಅಪ್ಪಣ್ಣ ಸಿನಿಮಾ ನಟನೆಗೆ ಅಣ್ಣಾವ್ರಿಗೆ ರಾಷ್ಟ್ರಪ್ರಶಸ್ತಿ ಅನೌನ್ಸ್ ಆಗಿತ್ತು. ಆದ್ರೆ ಆಗ ಈ ಸಿನಿಮಾದಲ್ಲಿ ಹಾಡುಗಳಿವೆ.. ಇದೊಂದು ಕಮರ್ಷಿಯಲ್ ಸಿನಿಮಾ.. ಈ ಸಿನಿಮಾಗೆ ಪ್ರಶಸ್ತಿ ಕೊಡೋದು ಬೇಡ ಅಂತ ಕೆಲ ಕಮೀಟಿ ಮೆಂಬರ್ಸ್ ಪಟ್ಟು ಹಿಡಿದು ಬಿಟ್ರಂತೆ. ಹೀಗಾಗಿ ಮತ್ತೆ ಅಣ್ಣಾವ್ರಿಗೆ ಪ್ರಶಸ್ತಿ ತಪ್ಪಿಹೋಯ್ತು, ಈ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ನಿರ್ದೇಶಕ ಮತ್ತು ಬರಹಗಾರ ಪ್ರಕಾಶ್ ರಾಜ್ ಮೇಹು.

ಹಾಗೆ ನೋಡಿದ್ರೆ ಡಾ.ರಾಜ್​ ನಟಿಸಿದ ಅನೇಕ ಪಾತ್ರಗಳು ರಾಷ್ಟ್ರಪ್ರಶಸ್ತಿಯನ್ನೂ ಮೀರಿಸುವಂತೆ ಇವೆ. ಆದ್ರೆ ಚಿತ್ರರಂಗದ ರಾಜಕೀಯ ರಾಜ್​ಕುಮಾರ್​ಗೆ ಪ್ರಶಸ್ತಿಗೆ ಬಾರದಂತೆ ತಡೆಯುವಲ್ಲಿ ಯಶಸ್ವಿಯಾಯ್ತು. ಆ ಕಾಲದಲ್ಲಿ ಕಮರ್ಷಿಯಲ್ ಸಿನಿಮಾಗಳಿಗೆ ಅವಾರ್ಡ್ ಕೊಡುವ ಪರಿಪಾಠ ಇರಲಿಲ್ಲ ಅದನ್ನೇ ನೆಪ ಮಾಡಿಕೊಂಡು ಕೆಲ ವಿರೋಧಿಗಳು ರಾಜ್​ಕುಮಾರ್​ಗೆ ಪ್ರಶಸ್ತಿ ಬಾರದಂತೆ ತಡೆದ್ರು.

ಒಟ್ಟಾರೆ ಕನ್ನಡದ ವರನಟನಿಗೆ ಕೊನೆವರೆಗೂ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಕೊಡಲಿಲ್ಲ. ಕನ್ನಡದ ಮಹಾನ್​ ನಟನಿಗೆ ಈ ವಿಚಾರದಲ್ಲಿ ಮಹಾಮೋಸ ಮಾಡಲಾಯ್ತು. ಆದರೇನಂತೆ ಕನ್ನಡ ಸಿನಿಪ್ರಿಯರ ಹೃದಯದಲ್ಲಿ ಅಣ್ಣಾವ್ರಿಗಿಂತ ಶ್ರೇಷ್ಟನಟ ಬೇರ್ಯಾರೂ ಇಲ್ಲ. ಪ್ರಶಸ್ತಿಗಳನ್ನೂ ಮೀರಿದ ಪ್ರೀತಿ ಸಂಪಾದಿಸಿದ ನಿಜವಾದ ರಾಜ ನಮ್ಮ ಅಣ್ಣಾವ್ರು.

ಅಮೀತ್, ಫಿಲ್ಮ್ ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES