Thursday, September 12, 2024

ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟನಂತರ ಏನಾಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಮೈಸೂರಿನ ಮುಡಾ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯ ರಾಜಪಾಲರು ಪ್ರಾಸಿಕ್ಯೂಕ್ಷನ್​ಗೆ ಅನುಮತಿ ನೀಡಿದ್ದಾರೆ. ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ ನಂತರ ಏನಾಗಬಹುದು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟನಂತರ ಏನಾಗುತ್ತೆ?

ಅರ್ಜಿದಾರರು ಪ್ರಾಸಿಕ್ಯೂಷನ್ ಅನುಮತಿಯನ್ನು ಹಿಡಿದುಕೊಂಡು ಸೆಷನ್ಸ ನ್ಯಾಯಾಲಯಕ್ಕೆ ಹೋಗಿ ತನಿಖೆಗೆ ಆದೇಶ ನೀಡುವಂತೆ ಕೋರುತ್ತಾರೆ. ನ್ಯಾಯಾಲಯ ಅರ್ಜಿದಾರರ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಕೋರಿಕೆಯನ್ನು ಪುರಸ್ಕರಿಸಬಹುದು ಇಲ್ಲವೇ ತಿರಸ್ಕರಿಸಬಹುದು. ಪುರಸ್ಕರಿಸಿದರೆ ಪೊಲೀಸರಿಗೆ ಇಲ್ಲವೇ ಲೋಕಾಯುಕ್ತರಿಗೆ ತನಿಖೆಯನ್ನು ಒಪ್ಪಿಸಬಹುದು.

ಇದನ್ನೂ ಓದಿ: ಸಿಎಂ ವಿರುದ್ದ ಪ್ರಾಸಿಕ್ಯೂಷನ್​ಗೆ ಅನುಮತಿ: ರಾಜ್ಯಪಾಲರ ವಜಾಕ್ಕೆ ಸಚಿವ ಈಶ್ವರ ಖಂಡ್ರೆ ಒತ್ತಾಯ

ಮುಖ್ಯಮಂತ್ರಿಗಳ ಮುಂದೆ ಬೇರೆ ಆಯ್ಕೆ ಇರೋದಿಲ್ವಾ?

ಮುಖ್ಯಮಂತ್ರಿಗಳು ಹೈಕೋರ್ಟ್ ನಲ್ಲಿ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸುತ್ತಾರೆ. ಅಲ್ಲಿಯೂ ಪ್ರಾಸಿಕ್ಯೂಷನ್ ಅನುಮತಿಯನ್ನು ಪುರಸ್ಕರಿಸಿದರೆ, ಪ್ರಕರಣ ಖಂಡಿತ ಸುಪ್ರೀಂ ಕೋರ್ಟ್ ಗೆ ಹೋಗಬಹುದು. ಸುಪ್ರೀಂ ಕೋರ್ಟ್ ಕೂಡಾ ಪ್ರಾಸಿಕ್ಯೂಷನ್ ಅನುಮತಿಯನ್ನು ಪುರಸ್ಕರಿಸಿದರೆ ಪೊಲೀಸ್ ಇಲ್ಲವೇ ಲೋಕಾಯುಕ್ತದಿಂದ ತನಿಖೆ ಶುರುವಾಗುತ್ತದೆ.

ಈ ಪ್ರಕ್ರಿಯೆ ಎಷ್ಟು ದಿನಗಳ ಕಾಲ ನಡೆಯಬಹುದು? 

ಈ ಕಾನೂನಿನ ಪ್ರಕ್ರಿಯೆ ಮುಗಿಯಲು ಎಷ್ಟು ಕಾಲ ಆಗಬಹುದು ಎನ್ನುವುದು ನ್ಯಾಯಾಲಯಗಳಿಗೆ ಬಿಟ್ಟ ವಿಚಾರ. ಆದರೆ 2011ರಲ್ಲಿ ಬಿ.ಎಸ್ ಯಡಿಯೂರಪ್ಪನವರು ಮತ್ತು ಅವರ ಮಕ್ಕಳಿಗೆ ಸಂಬಂಧಿಸಿದ ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ಸಿಕ್ಕ ಹತ್ತು ತಿಂಗಳುಗಳ ನಂತರ ಆರೋಪಪಟ್ಟಿ ಸಲ್ಲಿಕೆಯಾಗಿತ್ತು.

ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ನಂತರ ಯಡಿಯೂರಪ್ಪನವರು ರಾಜೀನಾಮೆ ನೀಡಿದ್ರಾ?

ಯಡಿಯೂರಪ್ಪನವರ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದು 2011ರ ಜನವರಿ 29ರಂದು. ಲೋಕಾಯುಕ್ತ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದು 2011ರ ಅಕ್ಟೋಬರ್ 14 ರಂದು. ಯಡಿಯೂರಪ್ಪನವರು ಬಂಧನಕ್ಕೀಡಾಗಿದ್ದು 2011ರ ಅಕ್ಟೋಬರ್ 15ರಂದು.

ಯಡಿಯೂರಪ್ಪನವರು 2011ರ ಆಗಸ್ಟ್ ತಿಂಗಳಲ್ಲಿಯೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಲ್ಲಾ?

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು 2011ರ ಜುಲೈ ಹನ್ನೊಂದರಂದು ನ್ಯಾ.ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ವರದಿ ನೀಡಿದ ಪ್ರಕರಣದಲ್ಲಿ. ಅವರು ಬಂಧನಕ್ಕೀಡಾಗಿದ್ದು ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ಮತ್ತು ಅಕ್ರಮಗಣಿಗಾರಿಕೆ ಹಗರಣದ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಿ ಆರೋಪಪಟ್ಟಿಯನ್ನು ಸಲ್ಲಿಸಿದ ನಂತರ 2011ರ ಅಕ್ಟೋಬರ್ 15ರಂದು.

RELATED ARTICLES

Related Articles

TRENDING ARTICLES