Sunday, July 7, 2024

ದರ್ಶನ್‌ಗೆ ಜುಲೈ 18ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್‌ಗೆ ಮತ್ತೆ ಪರಪ್ಪನ ಅಗ್ರಹಾರವೇ ಗತಿಯಾಗಿದೆ. ನಟ ದರ್ಶನ್‌ ಸೇರಿ ಹಲವು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಜುಲೈ 18ರವರೆಗೆ ವಿಸ್ತರಣೆ ಮಾಡಲಾಗಿದೆ.

ಬೆಂಗಳೂರಿನಲ್ಲಿರುವ ಆರ್ಥಿಕ ಅಪರಾಧಗಳ ಕೋರ್ಟ್‌ ನ್ಯಾಯಾಧೀಶರು ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಪೊಲೀಸ್‌ ಕಸ್ಟಡಿ ಬಳಿಕ ನ್ಯಾಯಾಂಗ ಬಂಧನದಲ್ಲಿದ್ದ ದರ್ಶನ್‌ ಸೇರಿ ಹಲವು ಆರೋಪಿಗಳ ಅವಧಿಯು ಮುಕ್ತಾಯಗೊಂಡ ಕಾರಣ ವಿಡಿಯೊ ಕಾನ್ಫರೆನ್ಸ್‌ ಮೂಲಕ ಜಡ್ಜ್‌ ಎದುರು ಆರೋಪಿಗಳನ್ನು ಹಾಜರುಪಡಿಸಲಾಯಿತು.

ವಿಚಾರಣೆ ನಡೆಸಿದ ನ್ಯಾಯಾಧೀಶರು ಜುಲೈ 18ರವರೆಗೆ ನ್ಯಾಯಾಂಗ ಬಂಧನಕ್ಕೆ ವಹಿಸಿ ಆದೇಶ ಹೊರಡಿಸಿದರು. ಇದರಿಂದಾಗಿ ದರ್ಶನ್‌ ಹಾಗೂ ಗ್ಯಾಂಗ್‌ಗೆ ಹಿನ್ನಡೆಯಾದಂತಾಗಿದೆ.

ಇದನ್ನೂ ಓದಿ: ವರಲಕ್ಷ್ಮಿ ಶರತ್‌ಕುಮಾರ್ ರಿಸಪ್ಷನ್‌ನಲ್ಲಿ ಮಿಂಚಿದ ಕಿಚ್ಚ ಸುದೀಪ್ ಕುಟುಂಬ!

ಕಾನೂನಿಗಿಂತ ಯಾರು ಮೇಲಲ್ಲ, ಈ ಕೃತ್ಯ ಮಾಡುವ ವ್ಯಕ್ತಿತ್ವ ದರ್ಶನ್‌ದಲ್ಲ- ಸುಮಲತಾ ಪ್ರತಿಕ್ರಿಯೆ:  ರೇಣುಕಾ ಸ್ವಾಮಿ ಹತ್ಯೆ ಕೇಸ್​ನಲ್ಲಿ ದರ್ಶನ್​ ಬಂಧನವಾದ ಬಳಿಕ ಸುಮಲತಾ ಅಂಬರೀಷ್​ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಬಗ್ಗೆ ಕೆಲವರು ಟೀಕೆ ಮಾಡಿದ್ದರು. ಸುಮಲತಾ ಅಂಬರೀಷ್​ ಅವರ ಮೌನದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಚರ್ಚೆ ಆಗಿತ್ತು. ಈಗ ಇದೇ ಮೊದಲ ಬಾರಿಗೆ ದರ್ಶನ್​ ಬಂಧನದ ಬಗ್ಗೆ ಸುಮಲತಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಸುದೀರ್ಘ ಪತ್ರ ಹಂಚಿಕೊಂಡಿದ್ದಾರೆ. ಅದರ ಪೋಸ್ಟ್​ ಹೀಗಿದೆ.

ಎಲ್ಲರಿಗೂ ನಮಸ್ಕಾರ.. ನಾನು 44 ವರ್ಷಗಳಿಂದ ನಟಿಯಾಗಿ, ಕಲಾವಿದೆಯಾಗಿ ಸಾರ್ವಜನಿಕ ಜೀವನದಲ್ಲಿದ್ದೇನೆ ಮತ್ತು ಕಳೆದ 5 ವರ್ಷಗಳಿಂದ ಸಂಸದೆಯಾಗಿದ್ದೆ. ಅಲ್ಲದೇ, ನಾನು ಕಲಾವಿದೆಯಾಗಿ, ಹೆಂಡತಿಯಾಗಿ ಮತ್ತು ತಾಯಿಯಾಗಿ ಅಥವಾ ಸಂಸದೆಯಾಗಿ ಮತ್ತು ಒಂದು ವ್ಯಕ್ತಿಯಾಗಿ ನನ್ನ ಜೀವನದಲ್ಲಿ ಪ್ರತಿಯೊಂದು ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ, ನನ್ನ ಬಳಿ ಯಾವುದೇ ಸತ್ಯ ಅಥವಾ ಮಾಹಿತಿಯಿಲ್ಲದೆ ನಾನು ಅಸಡ್ಡೆಯ, ಅನಗತ್ಯ, ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ.

ಇಂದು ನಾನು ಕೆಲವು ಸಂಗತಿಗಳನ್ನು ಸ್ಪಷ್ಟಪಡಿಸಲು, ನನ್ನ ಆಲೋಚನೆಗಳು ಮತ್ತು ನೋವನ್ನು ಹಂಚಿಕೊಳ್ಳಲು ಪೋಸ್ಟ್ ಮಾಡುತ್ತಿದ್ದೇನೆ ಏಕೆಂದರೆ ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಹೆಚ್ಚಿನ ಊಹಾಪೋಹಗಳನ್ನು ಪ್ರೋತ್ಸಾಹಿಸಲು ಅಥವಾ ನನ್ನ ನಿಲುವಿನ ಬಗ್ಗೆ ಅಭಿಮಾನಿಗಳಲ್ಲಿ ಯಾವುದೇ ಗೊಂದಲಗಳಿಗೆ ಎಡೆ ಮಾಡಿಕೊಡಲು ನಾನು ಬಯಸುವುದಿಲ್ಲ.

ನಾನು ಮೊದಲಿಗೆ ತಮ್ಮ ಮಗ ಮತ್ತು ಪತಿಯನ್ನು ಹೃದಯವಿದ್ರಾವಕ ರೀತಿಯಲ್ಲಿ ಕಳೆದುಕೊಂಡಿರುವ ರೇಣುಕಾಸ್ವಾಮಿ ಅವರ ಹೆತ್ತವರು ಮತ್ತು ಪತ್ನಿಗೆ ನನ್ನ ಸಂತಾಪವನ್ನು ಸೂಚಿಸುತ್ತೇನೆ ಮತ್ತು ಈ ದುರಂತವನ್ನು ಎದುರಿಸಲು ಮತ್ತು ಆ ನೋವನ್ನು ಭರಿಸಲು ಶಕ್ತಿಯನ್ನು ದೇವರು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಮ್ಮ ಕಾನೂನು ವ್ಯವಸ್ಥೆಯಿಂದ ಅವರಿಗೆ ಸಿಗಬೇಕಾದ ನ್ಯಾಯ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES