Monday, July 1, 2024

ಲಡಾಕ್‌ನ ನದಿಯಲ್ಲಿ ಸೇನಾ ವಾಹನ ಮಗುಚಿ ಭೀಕರ ದುರಂತ; ಐವರು ಯೋಧರು ಹುತಾತ್ಮ

ಲಡಾಕ್​: ಲಡಾಕ್‌ನ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಶ್ಯೋಕ್ ನದಿ ದಾಟುವ ಸಮಯದಲ್ಲಿ ಟ್ಯಾಂಕ್ ಅಪಘಾತಕ್ಕೀಡಾಗಿ ಐವರು ಸೈನಿಕರು ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಮೃತಪಟ್ಟ ಐವರು ಜೂನಿಯರ್ ಕಮಿಷನ್ಡ್ ಆಫೀಸರ್ ಎಂದು ಗುರುತಿಸಲಾಗಿದೆ.

ಲಡಾಕ್‌ನ ನ್ಯೋಮಾ-ಚುಶುಲ್ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆ ಬಳಿ T-72 ಟ್ಯಾಂಕ್‌ ನದಿಯನ್ನು ದಾಟುವಾಗ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ಅಪಘಾತದ ವೇಳೆ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದ ಸೈನಿಕರು ತಮ್ಮ ಟಿ -72 ಟ್ಯಾಂಕ್‌ನಲ್ಲಿ ಲೇಹ್‌ನಿಂದ 148 ಕಿ.ಮೀ. ದೂರದಲ್ಲಿರುವ ದೌಲತ್ ಬೇಗ್ ಓಲ್ಡಿಯ ಮಂದಿರ್ ಮೋರ್ಹ್ ಬಳಿ ನದಿಯನ್ನು ದಾಟುತ್ತಿದ್ದರು.

ಇದನ್ನೂ ಓದಿ: ದೆಹಲಿಯಲ್ಲಿ ಮಳೆಯಬ್ಬರಕ್ಕೆ ಒಂದೇ ದಿನ 8 ಮಂದಿ ಬಲಿ!

ಮುಂಜಾನೆ 3 ಗಂಟೆ ಸುಮಾರಿಗೆ ನದಿ ದಾಟುವಾಗ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆಯಿಂದ ಈ ದುರ್ಘಟನೆ ನಡೆದಿದೆ. ಎಲ್ಲ ಐದು ಸೈನಿಕರ ಶವಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದೆ ಎಂದು ಸೇನಾ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ. ಹಿಮ ಕರಗುವಿಕೆಯಿಂದಾಗಿ ನೀರಿನ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾಗಿದೆ ಎಂದು ಊಹಿಸಲಾಗಿದೆ. ಶ್ಯೋಕ್ ಸಿಂಧೂ ನದಿಯ ಉಪನದಿಯಾಗಿದೆ.

ಘಟನೆ ಬಗ್ಗೆ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಲಡಾಕ್‌ನಲ್ಲಿ ನದಿ ದಾಟುವಾಗ ಸಂಭವಿಸಿದ ಅಪಘಾತದಲ್ಲಿ ನಮ್ಮ ಐವರು ಧೈರ್ಯಶಾಲಿ ಸೈನಿಕರು ಪ್ರಾಣ ಕಳೆದುಕೊಂಡಿರುವುದು ತೀವ್ರ ದುಃಖ ತಂದಿದೆ. ನಮ್ಮ ಸೈನಿಕರು ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ಈ ದುಃಖದ ಸಮಯದಲ್ಲಿ ರಾಷ್ಟ್ರವು ಅವರೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES