Monday, July 1, 2024

ದೆಹಲಿಯಲ್ಲಿ ಮಳೆಯಬ್ಬರಕ್ಕೆ ಒಂದೇ ದಿನ 8 ಮಂದಿ ಬಲಿ!

ದೆಹಲಿ: ದಾಖಲೆಯ ಮುಂಗಾರು ಮಳೆಯ ಅಬ್ಬರಕ್ಕೆ ನವದೆಹಲಿಯಲ್ಲಿ ಒಂದೇ ದಿನಕ್ಕೆ 8 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ವಾರದವರೆಗೂ ಬಿರು ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ರಾಷ್ಟ್ರ ರಾಜಧಾನಿಯ ಜನರಿಗೆ, ಆಘಾತಕಾರಿ ರೀತಿಯಲ್ಲಿ ವರುಣ ಎಂಟ್ರಿ ಕೊಟ್ಟಿದ್ದಾನೆ. 1936ರ ಬಳಿಕ ಇದೇ ಮೊದಲ ಬಾರಿ ಒಂದೇ ದಿನಕ್ಕೆ 228 ಮಿಲಿ ಮೀಟರ್ ಅಂದ್ರೆ 23 ಸೆಂಟಿ ಮೀಟರ್​ನಷ್ಟು ಮಳೆ ದಾಖಲಾಗಿದೆ. 88 ವರ್ಷಗಳ ದಾಖಲೆಯ ವರುಣನ ಅಬ್ಬರಕ್ಕೆ ದೆಹಲಿಯ ಬಹುತೇಕ ಗಲ್ಲಿಗಳಲ್ಲಿ ಹೊಳೆಯಂತಾಗಿವೆ.

ಏರ್​ಪೋರ್ಟ್​​ನಲ್ಲಿ ಕೆನೊಪಿ ಕುಸಿದು ಸಂಭವಿಸಿದ ಅವಘಡದಲ್ಲಿ ಓರ್ವ ಕ್ಯಾಬ್ ಚಾಲಕ ಸೇರಿ ನಗರದ ವಿವಿಧೆಡೆ ಮಳೆ ಸಂಬಂಧಿ ದುರಂತಗಳಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ ದೆಹಲಿಯ ಪ್ರತಿಷ್ಠಿತ ವಸಂತ್ ವಿಹಾರ ಪ್ರದೇಶದಲ್ಲಿ ಗೋಡೆ ಕುಸಿದು ಮೂವರು ಮೃತಪಟ್ಟಿದ್ದಾರೆ.

ದಾಖಲೆ ಮಳೆ ನೀರು ಸಾಗುವ ಸಾಮರ್ಥ್ಯ ಹೊಂದಿಲ್ಲ ದೆಹಲಿಯ ಡ್ರೈನೇಜ್ ಸಿಸ್ಟಮ್!:

ದೆಹಲಿಯಲ್ಲಿ ವರ್ಷಕ್ಕೆ ಸರಾಸರಿ 800 ಮಿಮೀ ಮಳೆ ದಾಖಲಾಗುತ್ತದೆ. ಆದರೆ ಪ್ರಸಕ್ತ ವರ್ಷ ಒಂದೇ ದಿನ 235 ಮಿಮೀ ಮಳೆ ದಾಖಲಾಗಿದ್ದು, ವಾರ್ಷಿಕ ಸರಾಸರಿಯಲ್ಲೂ ದಾಖಲೆಯ ಮಳೆಯಾಗುವ ಸಾಧ್ಯತೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೊದಲ ಮಾನ್ಸೂನ್ ಮಳೆಗೆ ರಾಷ್ಟ್ರ ರಾಜಧಾನಿ ತತ್ತರ

ಮುಂದಿನ ಮೂರು ದಿನಗಳ ಕಾಲ ಹೆಚ್ಚಿನ ಮಳೆ ಆಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸದ್ಯ ಒಂದೇ ದಿನಕ್ಕೆ ಸುರಿದಿರುವ ಮಳೆಯ ನೀರನ್ನು ಭರಿಸುವಷ್ಟು ಸಾಮರ್ಥ್ಯ ದೆಹಲಿಯ ಡ್ರೈನೇಜ್ ಸಿಸ್ಟಮ್ ಹೊಂದಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ಪರಿಣಾಮ ಗಲ್ಲಿಗಲ್ಲಿಗಳಲ್ಲೂ ನೀರು ನಿಂತಿದ್ದು, ಪರಿಸ್ಥಿತಿ ಸುಧಾರಣೆಗೆ ಕೆಲ ಸಮಯ ಹಿಡಿಯಲಿದೆ ಎಂದಿದ್ದಾರೆ.

ನಗರದಲ್ಲಿ ಮಳೆ ಸಂಬಂಧಿತ ಅವಘಡ ಕುರಿತು 300ಕ್ಕೂ ಹೆಚ್ಚು ದೂರುಗಳು ಒಂದೇ ದಿನ ದಾಖಲಾಗಿವೆ. ಆದ್ಯತೆಯ ಮೇರೆಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಎಲ್​​ಜಿ ವಿ.ಕೆ. ಸೆಕ್ಸೇನಾ ಅಧಿಕಾರಿಗಳ ಜೊತೆಗೆ ನಿರಂತರ ಸಭೆ ನಡೆಸಿದ್ದು, ತುರ್ತು ಕ್ರಮಗಳಿಗೆ ಆದೇಶ ನೀಡಿದ್ದಾರೆ. ಅಲ್ಲದೇ 24/7 ಎಮರ್ಜೆನ್ಸಿ ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ಅಗತ್ಯ ಇರುವ ಜನರಿಗೆ ತುರ್ತಾಗಿ ಸ್ಪಂದಿಸಲು ಸೂಚಿಸಿದ್ದಾರೆ.

ನಗರದೆಲ್ಲೆಡೆ ನೂರಾರು ಮರಗಳು ಕುಸಿದಿದ್ದು ತೆರವು ಮಾಡಲಾಗ್ತಿದೆ. ಅಂಡರ್ ಗ್ರೌಂಡ್ ಸೇತುವೆಗಳು ಸೇರಿದಂತೆ ನೀರು ನಿಂತಿರುವ ಕಡೆಗಳಲ್ಲಿ ತೆರವಿಗೆ ಕ್ರಮ ಕೈಗೊಳ್ಳಲಾಗ್ತಿದೆ. ನೀರು ನಿಂತಿರುವ ಪ್ರದೇಶಗಳಲ್ಲಿ ತೆರವು ಕಾರ್ಯಾಚರಣೆ ಚುರುಕುಗೊಳಿಸಿರುವ ಅಧಿಕಾರಿಗಳು ಕಾಮಗಾರಿ ಕೈಗೊಂಡಿದ್ದಾರೆ.

RELATED ARTICLES

Related Articles

TRENDING ARTICLES