Monday, July 1, 2024

ಮೊದಲ ಮಾನ್ಸೂನ್ ಮಳೆಗೆ ರಾಷ್ಟ್ರ ರಾಜಧಾನಿ ತತ್ತರ

ದೆಹಲಿ: ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ರಾಷ್ಟ್ರ ರಾಜಧಾನಿ ದೆಹಲಿಯ ಜನರಿಗೆ ಈ ಬಾರಿ ಮಾನ್ಸೂನ್‌ನ ಮೊದಲ ಮಳೆ ದೊಡ್ಡ ರಿಲ್ಯಾಕ್ಸ್ ನೀಡಿದೆ. ಆದರೆ ನಿನ್ನೆ ರಾತ್ರಿ ಸುರಿದ ದಾಖಲೆ ಪ್ರಮಾಣದ ಮಳೆ ಇಡೀ ದೆಹಲಿಯನ್ನು ಸಂಕಷ್ಟಕ್ಕೆ ದೂಡಿದೆ. ಎಲ್ಲಾ ರಸ್ತೆಗಳಲ್ಲಿ ನೀರು ತುಂಬಿದೆ. ಇಡೀ ನಗರದಲ್ಲಿ ಟ್ರಾಫಿಕ್ ಜಾಮ್ ಆವರಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಯಿತು.

ರಾತ್ರಿ ಸರಿ ಸುಮಾರು ಮೂರು ಗಂಟೆ ಸುರಿದ ಮಳೆಗೆ ಭಾಗಶಃ ದೆಹಲಿ ಜಲಾವೃತಗೊಂಡಿದೆ. ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ರ ಮೇಲ್ಛಾವಣಿಯ ಒಂದು ಭಾಗವು ಕುಸಿದುಬಿದ್ದು ಒಬ್ಬ ವ್ಯಕ್ತಿ ಸಾವನ್ನಪ್ಪಿ ಆರು ಮಂದಿ ಗಾಯಗೊಂಡಿದ್ದಾರೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಕಿಲೋಮೀಟರ್ ಉದ್ದಕ್ಕೂ ಎಲ್ಲೆಡೆ ಟ್ರಾಫಿಕ್ ಜಾಮ್ ಆಗಿ ಸಂಚಾರಕ್ಕೆ ತೊಂದರೆಯಾಯಿತು‌.

ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಚಾವಣಿ ಕುಸಿತ: ಓರ್ವ ಸಾವು

ಈ ನಡುವೆ ನಿನ್ನೆ ಒಂದೇ ದಿನ ರಾತ್ರಿ 228 ಎಂಎಂ ಮಳೆ ದಾಖಲಾಗಿದೆ. 1936 ರಲ್ಲಿ 235.5 ಎಂಎಂ ಮಳೆ ದಾಖಲಾಗಿತ್ತು. ಇದಾದ ಬಳಿಕ ನಿನ್ನೆ ಅತಿ ಹೆಚ್ಚು ಮಳೆ ಒಂದೇ ದಿನ ಸುರಿದಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ‌. ಇನ್ನೂ ಮುಂದಿನ ಒಂದು ವಾರ ಭಾರಿ ಮಳೆಯ ಎಚ್ಚರಿಕೆ ನೀಡಿದೆ.

ದೆಹಲಿಯಲ್ಲಿ ನೀರು ನುಗ್ಗುತ್ತಿದ್ದಂತೆ ಸೋಶಿಯಲ್ ಮೀಡಿಯಾಗಳಲ್ಲಿ ವೀಡಿಯೋ ಪೋಸ್ಟ್ ಮಾಡಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ನೀರು ತುಂಬಿದ್ದಕ್ಕೆ ಕೇಜ್ರಿವಾಲ್ ಸರ್ಕಾರವನ್ನು, ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತಕ್ಕೆ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ನಡುವೆ ಕಾಂಗ್ರೆಸ್ ಕೂಡಾ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ.

RELATED ARTICLES

Related Articles

TRENDING ARTICLES