Sunday, October 6, 2024

ನಾಳೆ ಸಂಜೆ 7.15ಕ್ಕೆ ಮೋದಿ ಪದಗ್ರಹಣ: ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ

ದೆಹಲಿ: NDA ಸಂಸದೀಯ ನಾಯಕರಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ ನಾಳೆ ಸಂಜೆ ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜೂನ್​9 ರಂದು ಸಂಜೆ 7.15 ಕ್ಕೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನರೇಂದ್ರ ಮೋದಿ ಮತ್ತು ಅವರ ಸಂಪುಟದ ಕೆಲವು ಸಚಿವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಿದ್ಧತೆ ಭರದಿಂದ ಸಾಗಿದೆ. ಸುಮಾರು 8 ಸಾವಿರ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ಇದೇ ವೇಳೆ ಜೂನ್​ 15 ಮತ್ತು 22 ರಂದು ರಾಷ್ಟ್ರಪತಿ ಭವನದಲ್ಲಿ ನಿಗದಿಯಾಗಿದ್ದ ಚೇಂಜ್ ಆಫ್ ಗಾರ್ಡ್ ರದ್ದುಗೊಳಿಸಲಾಗಿದೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.

ಪ್ರಮಾಣವಚನ ಸಮಾರಂಭಕ್ಕೆ ಹೆಚ್ಚಿನ ಭದ್ರತೆ:

ಜೂನ್ 9ರಂದು ನರೇಂದ್ರ ಮೋದಿ ಪ್ರಧಾನಿಯಾಗಿ ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸುತ್ತಿರುವ ಸಮಾರಂಭಕ್ಕೆ ಹೆಚ್ಚಿನ ಭದ್ರತೆ ಕೈಗೊಳ್ಳಲಾಗುತ್ತದೆ. ಅರೆಸೇನಾ ಪಡೆಯ 5 ತುಕಡಿಯ ಹಲವು ಸುತ್ತುಗಳ ಭದ್ರತೆ ಒದಗಿಸಲಾಗುತ್ತದೆ. ಇನ್ನು NSG ಕಮಾಂಡೊಗಳು ಹದ್ದಿನ ಕಣ್ಣಿಡಲಿವೆ. ಡ್ರೋಣ್​​ ಕಣ್ಗಾವಲು ಇಡಲಿದೆ. ಜೊತೆಗೆ ರಾಷ್ಟ್ರಪತಿ ಭವನದ ಸುತ್ತ ಸ್ಟೈಪರ್‌ಗಳನ್ನು ನಿಯೋಜಿಸಲಾಗುತ್ತದೆ.

ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಾರ್ಕ್‌ ದೇಶಗಳ ಪ್ರಮುಖರನ್ನು ಆಹ್ವಾನಿಸಿರುವುದರಿಂದ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಗಣ್ಯರು ತಂಗುವ ಹೋಟೆಲಿನಿಂದ ಪ್ರಮಾಣವಚನ ಸ್ವೀಕರಿಸುವ ಸ್ಥಳಕ್ಕೆ ತೆರಳುವ ಹಾಗೂ ಮರಳುವ ಮಾರ್ಗವನ್ನು ಅವರ ಸಂಚಾರಕ್ಕಾಗಿ ಮಾತ್ರ ಮೀಸಲಿಡಲಾಗಿದೆ. ಹೀಗಾಗಿ ಹೆಚ್ಚುವ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ನಾಳೆ ಮೋದಿ ಪ್ರಮಾಣ ವಚನ ಸ್ವೀಕಾರ: ರಾಜ್ಯದ ಯಾವ್ಯಾವ ಸಂಸದರಿಗೆ ಸಚಿವ ಸ್ಥಾನ?

ಗಣ್ಯಾತಿ ಗಣ್ಯರಿಗೆ ಮೋದಿ ಆಹ್ವಾನ:

ಇನ್ನು ರಾಷ್ಟ್ರಪತಿ ಭವನದಲ್ಲಿ ಈಗಾಗಲೇ 8,000 ಅತಿಥಿಗಳಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ಗೆದ್ದ ನಂತರ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಭಾರತದ ಪ್ರಧಾನಮಂತ್ರಿಯಾಗಲಿದ್ದಾರೆ. ಎರಡು ದಿನಗಳ ಹಿಂದೆ ದೆಹಲಿಯಲ್ಲಿ ಎನ್​​ಡಿಎ ಒಕ್ಕೂಟಗಳ ಸಭೆ ನಡೆದಿದೆ. ಈ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಎನ್​ಡಿಎ ಒಕ್ಕೂಟ ನಾಯಕನಾಗಿ ಮೋದಿ ಅವರನ್ನು ಆಯ್ಕೆ ಮಾಡಲಾಗಿದೆ.

ಸಮಾರಂಭಕ್ಕೆ ದಕ್ಷಿಣ ಏಷ್ಯಾದ ವಿವಿಧ ನಾಯಕರನ್ನು ಆಹ್ವಾನಿಸಲಾಗಿದೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಖಚಿತಪಡಿಸಿದ್ದಾರೆ. ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್, ಭೂತಾನ್ ಪ್ರಧಾನಿ ಟ್ಶೆರಿಂಗ್ ಟೋಬ್ಗೇ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರಿಗೆ ಆಹ್ವಾನಗಳನ್ನು ಕಳುಹಿಸಲಾಗಿದೆ.

ನಮೋ ಪ್ರಮಾಣವಚನ ಕಾರ್ಯಕ್ರಮದಲ್ಲಿ BSY:

ನಾಳೆ ಸಂಜೆ 7.15ಕ್ಕೆ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದು, ಹಲವಾರು ಗಣ್ಯರಿಗೆ ಆಹ್ವಾನ ನೀಡಲಾಗಿದೆ. ರಾಜ್ಯದ ಹಿರಿಯ ಬಿಜೆಪಿ ನಾಯಕರಿಗೂ ಆಹ್ವಾನ ನೀಡಲಾಗಿದೆ. ಈ ಹಿನ್ನೆಲೆ ಇಂದು ಮಾಜಿ ಸಿಎಂ ಬಿ.ಎಸ್​​.ಯಡಿಯೂರಪ್ಪ ದೆಹಲಿಗೆ ತೆರಳಲಿದ್ದಾರೆ.

ದೆಹಲಿಯಲ್ಲಿ ಬೀಡು ಬಿಟ್ಟ ಕುಮಾರಸ್ವಾಮಿ:

ಮಾಜಿ ಸಿಎಂ ಹಾಗೂ ಮಂಡ್ಯ ಸಂಸದ H.D.ಕುಮಾರಸ್ವಾಮಿ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಈಗಾಗಲೇ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಜೆಡಿಎಸ್‌ ಬೆಂಬಲ ಸೂಚಿಸಿದ್ದು, ಹೆಚ್ಡಿಕೆ ಅವರಿಗೆ ಸಚಿವ ಸ್ಥಾನ ಸಿಗುವುದು ಖಚಿತವಾಗಿದೆ. ಇನ್ನು ನಾಳೆ ಪ್ರಧಾನಿ ಪದಗ್ರಹಣ ಕಾರ್ಯಕ್ರಮ ನಿಮಿತ್ತ ಮಾಜಿ ಪ್ರಧಾನಿ H.D.ದೇವೇಗೌಡ, ಪತ್ನಿ ಅನಿತಾ, ಮಗ ನಿಖಿಲ್, ಸೊಸೆ ರೇವತಿ ಮತ್ತು ಮೊಮ್ಮಗ ನವದೆಹಲಿಗೆ ತೆರಳಲಿದ್ದಾರೆ.

RELATED ARTICLES

Related Articles

TRENDING ARTICLES